ಮೈಸೂರು :  ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2026 ರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು  ಕುವೆಂಪುನಗರ ಶಾಖಾ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಸೈಬ‌ರ್ ಅಪರಾಧಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರಿನ ನಜರಬಾದ್‌ನ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಅನಿಲ್ ಚೌಹಾಣ್ ಅವರು ಸೈಬ‌ರ್ ಅಪರಾಧಗಳ ಕುರಿತು ಮಾತನಾಡಿ, ಸಾರ್ವಜನಿಕರಿಗೆ ಮಹತ್ವದ ಮಾಹಿತಿ ಹಾಗೂ ಜಾಗೃತಿ ಮೂಡಿಸಿದರು. ಕಳೆದ 7-8 ವರ್ಷಗಳಿಂದ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಅದರಲ್ಲೂ ಯುಪಿಐ (UPI) ಮೂಲಕ ನಡೆಯುವ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ತಿಳಿಸಿದರು. ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಗಳು ಸೈಬ‌ರ್ ವಂಚಕರ ಪ್ರಮುಖ ಗುರಿಯಾಗುತ್ತಿದ್ದಾರೆ ಎಂದರು. ಸೈಬರ್ ಅಪರಾಧಗಳ ಮೂಲಕ ಸುಮಾರು 60ರಿಂದ 70 ಕೋಟಿ ರೂಪಾಯಿಗಳಷ್ಟು ಹಣಕಾಸಿನ ನಷ್ಟ ಸಂಭವಿಸಿರುವುದನ್ನು ಉಲ್ಲೇಖಿಸಿದ ಅವರು, ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಹಣಕಾಸು ವಹಿವಾಟುಗಳು, ಟ್ರೇಡಿಂಗ್ ಹಾಗೂ ಹೂಡಿಕೆ ವೇದಿಕೆಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ಎಚ್ಚರಿಸಿದರು. ಡಿಜಿಟಲ್ ಹೂಡಿಕೆಯ ಹೆಸರಿನಲ್ಲಿ ನಡೆದ ಎಂಟು ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿರುವುದಾಗಿ ತಿಳಿಸಿದರು. ಇಂದಿನ ದಿನಗಳಲ್ಲಿ ಭೌತಿಕವಾಗಿ ನಡೆಯುವ ಅಪರಾಧ ಪ್ರಕರಣಗಳಿಗಿಂತ ಆನ್‌ಲೈನ್ ಮೂಲಕ ನಡೆಯುವ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊಬೈಲ್ ಆ್ಯಪ್‌ಗಳು ಮತ್ತು ಸರ್ಚ್ ಇಂಜಿನ್‌ಗಳು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಬಳಕೆದಾರರು ತಮ್ಮ ಮೊಬೈಲ್ ಫೋನ್ ಹಾಗೂ ಇಮೇಲ್ ಐಡಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಗೂಗಲ್ ಪ್ಲೇ ಸ್ಟೋರ್‌ನಿಂದಲೇ ಅಧಿಕೃತ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಬೇಕು. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಎಪಿಕೆ (APK) ಫೈಲ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಬಾರದು. ಇಂತಹ ಫೈಲ್‌ಗಳ ಮೂಲಕ ಮೊಬೈಲ್‌ನಲ್ಲಿರುವ ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಯನ್ನು ಕಳವು ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ಸಾರ್ವಜನಿಕರು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದೆ, ಒಟಿಪಿ (OTP), ಬ್ಯಾಂಕ್ ವಿವರಗಳು ಹಾಗೂ ಪಾಸ್‌ವರ್ಡ್ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಸೈಬರ್ ಅಪರಾಧಗಳ ಬಗ್ಗೆ ಜಾಗರೂಕರಾಗಿರುವುದೇ ಆನ್‌ಲೈನ್ ವಂಚನೆಗಳಿಂದ ರಕ್ಷಿಸಿಕೊಳ್ಳುವ ಪ್ರಮುಖ ಮಾರ್ಗವಾಗಿದೆ ಎಂದು ತಿಳಿಸಿದರು. ಹಾಗೂ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ www.cybercrime.gov.in ಮೂಲಕ ದೂರು ದಾಖಲಿಸಿ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಈ ಉಪನ್ಯಾಸವು ಸಾರ್ವಜನಿಕರಲ್ಲಿ ಡಿಜಿಟಲ್ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.