ಬೆಂಗಳೂರು :  ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು ರಾಜ್ಯದ ರೈತರ ಹಿತದೃಷ್ಟಿಯಿಂದ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ₹22,400 ಕೋಟಿ ನೆರವು ನೀಡುವಂತೆ ಮನವಿ ಸಲ್ಲಿಸಿದ್ದೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು  ಕೃಷಿ ಸಚಿವರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಕೋರಿ ಪತ್ರ ಬರೆದಿದ್ದರೂ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರೈತರ ಸಂಕಷ್ಟದ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯ ಸರಿಯಾದ ಕ್ರಮವಲ್ಲ ಎಂದರು.ರಾಜ್ಯದಲ್ಲಿ ಬರದಿಂದಾಗಿ ಬರೋಬ್ಬರಿ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಒಟ್ಟು ₹62,481.88 ಕೋಟಿ ನಷ್ಟ ಸಂಭವಿಸಿದೆ. ಅನ್ನದಾತರ ಬದುಕಿನ ಮೇಲೆ ಬರ ತಂದೊಡ್ಡಿರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ, ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲು ನಮ್ಮ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ.ಕೇಂದ್ರದ ನೆರವು ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ರೈತರನ್ನು ಸಂಕಷ್ಟದಲ್ಲಿ ಕೈಬಿಡಲು ಸಾಧ್ಯವಿಲ್ಲ. ಹೀಗಾಗಿಯೇ ಅರ್ಹ ರೈತರಿಗೆ ತಲಾ ₹5,000 ಪರಿಹಾರವನ್ನು ಎರಡು ಹಂತಗಳಲ್ಲಿ ನೀಡುವುದಾಗಿ ಘೋಷಿಸಿ, ರೈತರ ನೆರವಿಗೆ ನಮ್ಮ ಸರ್ಕಾರ ಧಾವಿಸಿದೆ. ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಎಂದಿಗೂ ನಿಲ್ಲುವುದಿಲ್ಲ. ಅನ್ನದಾತರ ಬೆನ್ನಿಗೆ ನಿಂತು ಅವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಬದ್ಧತೆ ಎಂದು ಹೇಳಿದರು.