ಚಾಮರಾಜನಗರ : ತುಳಸಿ ಗಿಡವು ಪವಿತ್ರತೆಯ ಸಂಕೇತ. ಭಾರತೀಯ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅಪಾರ ಗೌರವ,  ಭಕ್ತಿ, ನಂಬಿಕೆ ಮತ್ತು ಮಹತ್ವವನ್ನು ನೀಡಲಾಗಿದೆ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ತುಳಸಿ ವಿವಾಹ ಪ್ರತಿ ಮನೆ ಮನೆಯಲ್ಲೂ ಶಾಂತಿ,ನೆಮ್ಮದಿ, ಹಾಗೂ ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತದೆ  ಸಂಸ್ಕೃತಿ ಚಿಂತಕ,  ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ  ಸುರೇಶ್. ಎನ್. ಋಗ್ವೇದಿ ತಿಳಿಸಿದರು. ಅವರು ಋಗ್ವೇದಿ ಯೂತ್ ಕ್ಲಬ್ ಮತ್ತು ಜೈ ಹಿಂದ್  ಪ್ರತಿಷ್ಠಾನ  ನಗರದ ಋಗ್ವೇದಿ ಕುಟೀರ ದಲ್ಲಿ ಹಮ್ಮಿಕೊಂಡಿದ್ದ ತುಳಸಿ ಹಬ್ಬ ಮತ್ತು ಮಹತ್ವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭಾರತದ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ಪೂಜಿಸುವ ಸಂಪ್ರದಾಯ ಪರಂಪರೆ ಬೆಳೆದು ಬಂದಿದೆ. ತುಳಸಿ ಗಿಡವೂ ಇಡೀ ವಾತಾವರಣವನ್ನು ಸಕಾರಾತ್ಮಕವಾಗಿ ಉಂಟು ಮಾಡುವ ಜೊತೆಗೆ ಶಾಂತಿ ಶುದ್ಧತೆ ಹಾಗೂ ಆರೋಗ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿ   ಶ್ರೀ ಲಕ್ಷೀ ಸ್ವರೂಪ. ದೇವಾಲಯಗಳಲ್ಲಿ ತುಳಸಿ ಮಾಲೆಗೆ ಮಹತ್ವ ನೀಡಿ ಪ್ರತಿ ಪೂಜೆಯಲ್ಲೂ ಬಳಸುವ ಮೂಲಕ ಮಾನವ ಸದಾಕಾಲ ಆರೋಗ್ಯ,  ಸಂತೋಷ, ಆನಂದ ಸಂಭ್ರಮ ಪಡುವ ಮೂಲಕ ಭಾರತೀಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ತುಳಸಿ ಗಿಡದ ಬೀಜ, ಕಾಂಡ,  ಎಲೆ ಪ್ರತಿಯೊಂದು ಅಂಶವು ಆರೋಗ್ಯದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ತುಂಬಾ ಮಹತ್ವ ನೀಡಲಾಗಿದೆ. ನೂರಾರು ರೋಗಗಳು ತುಳಸಿಯಿಂದ ವಾಸಿಯಾಗುವ ನಂಬಿಕೆ ಭಾರತೀಯರದು ಹಾಗೂ ಸತ್ಯವೂ ಹೌದು. ತುಳಸಿ ವಿವಾಹದ ಸಂದರ್ಭದಲ್ಲಿ ದೀಪ ಹಚ್ಚಿ ಬೆಟ್ಟದನೆಲ್ಲಿ ಕಾಯಿ, ನೈವೇದ್ಯ,ಸಿಹಿ ಹಂಚುವ, ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ ಎಂದರು. ಉದ್ಘಾಟನೆಯನ್ನು ಜೈಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಬೆಂಗಳೂರಿನ ಜ್ಯೋತಿಲಕ್ಷ್ಮಿ ನಾಗಭೂಷಣ್ ದೀಪ ಪ್ರಜ್ವಲಿಸುವ ಮೂಲಕ  ನೆರವೇರಿಸಿದರು. ಪ್ರತಿ ದಿನವೂ ಮಹಿಳೆಯರು ತುಳಸಿ ಕಟ್ಟೆಗೆ ಪೂಜಿಸುವ ಮೂಲಕ ಭಗವಂತನ ಅನುಗ್ರಹ, ಆಶೀರ್ವಾದ ಪಡೆಯುವ ಜೊತೆಗೆ ಇಡೀ ಕುಟುಂಬದ ಸಂರಕ್ಷಣೆ,ಅಭಿವೃದ್ಧಿ, ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿಕೊಳ್ಳುವ ಭಕ್ತಿ ಪ್ರಧಾನವಾದ ತುಳಸಿ ಪೂಜೆಯು ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಅಪಾರ ಧೈರ್ಯ, ಶಕ್ತಿ ಸಾಮರ್ಥ್ಯ ಹಾಗೂ ಮಾನಸಿಕವಾದ ಚೈತನ್ಯವನ್ನು ಹೆಚ್ಚಿಸುವ ತುಳಸಿ ಹಬ್ಬ ಭಾರತೀಯರ ಪುರಾತನ ಹಬ್ಬಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ ಮಾತನಾಡಿ ಹಬ್ಬಗಳ ನಾಡಾಗಿರುವ ಭಾರತವು ಸದಾಕಾಲ ಸರ್ವರಿಗೂ ಸಂತೋಷವನ್ನು ನೆಮ್ಮದಿಯನ್ನು ನೀಡಲಿ. ಆರೋಗ್ಯ ಹೆಚ್ಚಲಿ. ಸಮೃದ್ಧಿಯಿಂದ, ನೆಮ್ಮದಿಯಿಂದ ಬದುಕೋಣ. ಎಲ್ಲರನ್ನೂ ಗೌರವಿಸೋಣ ತಾಯಿ ತುಳಸಿ ಸಾಕ್ಷಾತ್ ಲಕ್ಷ್ಮಿ ಸ್ವರೂಪವಾಗಿದ್ದು ಪ್ರತಿ ಮನೆಯಲ್ಲೂ ಪೂಜಿಸುವ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು  ಎಂದು ತುಳಸಿ ವಿವಾಹ ಹಬ್ಬದ ಶುಭಾಶಯಗಳು ಕೋರಿ ಅದರ ಪೌರಾಣಿಕ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಯಲಹಂಕದ ರಾಧಾನಾಗ ಭೂಷಣ್, ಜೈ ಹಿಂದ್ ಪ್ರತಿಷ್ಠಾನದ ವಾಣಿಶ್ರೀ ಮುರುಗೇಶ್,ವೈಷ್ಣವಿ, ವಂದನಾ, ಶ್ರಾವ್ಯಋಗ್ವೇದಿ, ವರ್ಷಿಣಿ, ಮಾಲಾ ಮುಂತಾದವರು ಉಪಸ್ಥಿತರಿದ್ದರು.