ಟೋಕಿಯೋ :  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನನ್ನನ್ನು ಒಳಗೊಂಡ ಕರ್ನಾಟಕದ ನಿಯೋಗವು ಟೋಕಿಯೊದ ಪ್ರಸಿದ್ಧ Tokyo Midtown Roppongi ನಗರಾಭಿವೃದ್ಧಿ ಯೋಜನೆಗೆ ಭೇಟಿ ನೀಡಿ ಅಧ್ಯಯನ ನಡೆಸಿದೆವು ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.ಜಪಾನ್‌ ನ ಪ್ರಮುಖ ವಾಸ್ತುಶಿಲ್ಪ ಮತ್ತು ನಗರ ಯೋಜನಾ ಸಂಸ್ಥೆಯಾದ Nikken Sekkei ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು, ಹಿಂದಿನ ರಕ್ಷಣಾ ಇಲಾಖೆಯ ಸುಮಾರು 25 ಎಕರೆ ಭೂಮಿಯನ್ನು ಆಧುನಿಕ, ಚೈತನ್ಯಶೀಲ ನಗರ ಪ್ರದೇಶವಾಗಿ ಪರಿವರ್ತಿಸಿರುವ ಮಾದರಿಯಾಗಿದೆ. ಸುಮಾರು ಶೇ. 50ರಷ್ಟು ಪ್ರದೇಶವನ್ನು ಹಸಿರು ಮತ್ತು ಮುಕ್ತ ಸ್ಥಳಗಳಾಗಿ ಉಳಿಸಿಕೊಂಡು, ಕಚೇರಿಗಳು, ವಸತಿ, ವಾಣಿಜ್ಯ, ಆತಿಥ್ಯ ಹಾಗೂ ಸಾಂಸ್ಕೃತಿಕ ಸೌಲಭ್ಯಗಳನ್ನು ಸಮಗ್ರವಾಗಿ ಸಂಯೋಜಿಸಿರುವುದು ವಿಶೇಷ.ಸಮಗ್ರ ಮಾಸ್ಟರ್ ಪ್ಲಾನಿಂಗ್, ಲಂಬಾಭಿವೃದ್ಧಿ, ಸಮರ್ಥ ಭೂಬಳಕೆ, ಪಾದಚಾರಿ ಸ್ನೇಹಿ ಸಾರ್ವಜನಿಕ ಸ್ಥಳಗಳು, ಸುಗಮ ಸಾರಿಗೆ ಸಂಪರ್ಕ ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳ ಮೂಲಕ ಸುಸ್ಥಿರ ನಗರಗಳನ್ನು ರೂಪಿಸಿರುವ ಈ ಮಾದರಿಯ ವಿವಿಧ ಆಯಾಮಗಳನ್ನು ನಿಯೋಗವು ಪರಿಶೀಲಿಸಿತು. ಜಪಾನ್ ನ ನಗರಾಭಿವೃದ್ಧಿ ಅನುಭವ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರಿನ ಕಾರ್ಯತಂತ್ರದ ಪುನರಾಭಿವೃದ್ಧಿ ಸೇರಿದಂತೆ ಕರ್ನಾಟಕದ ಇತರ ನಗರಗಳ ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿಯೂ ಇಂತಹ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು.ಜಾಗತಿಕ ಮಾದರಿಗಳಿಂದ ಕಲಿಕೆ, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಕೆ, ಸುಸ್ಥಿರ, ಸ್ಮಾರ್ಟ್ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕರ್ನಾಟಕದ ನಗರಗಳ ನಿರ್ಮಾಣವೇ ನಮ್ಮ ಸಂಕಲ್ಪ ಎಂದು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.