ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ; ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಎನ್. ಚಲುವರಾಯಸ್ವಾಮಿ

ಮೈಸೂರು: ಸಂವಿಧಾನ ಉಳಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆ ಮತ್ತು ಸಾಮಾನ್ಯ ಪ್ರಜೆಯ ಮತಕ್ಕೆ ಬೆಲೆ ಇರುತ್ತದೆ. ಸಂವಿಧಾನ ಕೇವಲ ಪೂಜಿಸುವ ಪುಸ್ತಕವಲ್ಲ; ಅದು ನಮ್ಮ ಆಡಳಿತದ ಮಂತ್ರ, ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ಸಮಾಜ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಇಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 'ಸಂವಿಧಾನ ದಿನಾಚರಣೆ' ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಾಮಾಜಿಕ ನ್ಯಾಯಕ್ಕೆ ಶತಮಾನಗಳ ಹಿಂದೆಯೇ ಭದ್ರ ಬುನಾದಿ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಭೂಮಿ ಮೈಸೂರಿನಲ್ಲಿ ಇಂದು ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ, ಎಂದ ಸಚಿವರು, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಕಟ್ಟಕಡೆಯ ಪ್ರಜೆಗೂ ನೀಡಿದ 'ಸ್ವಾಭಿಮಾನದ ಬದುಕು' ಹಾಗೂ 'ಮತದಾನದ ಪರಮಾಧಿಕಾರ'ವನ್ನ ಸ್ಮರಿಸಿದರು. ದೇಶದಲ್ಲಿ ಯಾರೇ ಅಧಿಕಾರಕ್ಕೆ ಬರಲಿ, ಆಡಳಿತವು ಸಂವಿಧಾನದ ಚೌಕಟ್ಟಿನಲ್ಲೇ ನಡೆಯಬೇಕೇ ಹೊರತು ಯಾರದ್ದೋ ಸರ್ವಾಧಿಕಾರದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಂವಿಧಾನ ರಕ್ಷಣೆಗೆ ಕರೆ "ಮಹಾತ್ಮ ಗಾಂಧೀಜಿ, ಪಂಡಿತ್ ನೆಹರು, ಸರ್ದಾರ್ ಪಟೇಲ್ ಮತ್ತು ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ವಿಶ್ವವೇ ಮೆಚ್ಚುವ ಶ್ರೇಷ್ಠ ಸಂವಿಧಾನವನ್ನ ದೇಶಕ್ಕೆ ಅರ್ಪಿಸಿದ ಹೆಮ್ಮೆ ನಮಗಿದೆ. ಆದರೆ ಇಂದು ಒಕ್ಕೂಟ ವ್ಯವಸ್ಥೆಯನ್ನ ದುರ್ಬಲಗೊಳಿಸುವ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನ ಕಸಿಯುವ ಮತ್ತು ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವ ಹುನ್ನಾರಗಳು ನಡೆಯುತ್ತಿವೆ. ಸಂವಿಧಾನ ಬದಲಿಸುತ್ತೇವೆ ಎಂದು ಹೊರಟವರಿಗೆ ದೇಶದ ಜನತೆ ತಕ್ಕ ಪಾಠ ಕಲಿಸಿದ್ದಾರೆ, ಮುಂದೆಯೂ ಕಲಿಸುತ್ತಾರೆ," ಎಂದು ಅವರು ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳು ಸಂವಿಧಾನದ ಆಶಯಕ್ಕೆ ಪೂರಕ
ರಾಜ್ಯ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳನ್ನ ಉಲ್ಲೇಖಿಸಿದ ಅವರು, "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಕಿಕೊಟ್ಟ ಬಡವರ ಪರವಾದ ಹಾದಿಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಇವು ಕೇವಲ ಉಚಿತ ಕೊಡುಗೆಗಳಲ್ಲ ಬಡವರ ಹಸಿವು ನೀಗಿಸುವ, ಮಹಿಳೆಯರನ್ನ ಆರ್ಥಿಕವಾಗಿ ಸಬಲಗೊಳಿಸುವ ಮತ್ತು ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನ ಜಾರಿಗೆ ತರುವ ಐತಿಹಾಸಿಕ ಹೆಜ್ಜೆಗಳಾಗಿವೆ. ಈ ಮೂಲಕ ಅಂಬೇಡ್ಕರ್ ಅವರ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕನಸು ನನಸಾಗುತ್ತಿದೆ," ಎಂದು ಬಣ್ಣಿಸಿದರು.
ರೈತರ ಕಣ್ಣಲ್ಲಿ ಸಂವಿಧಾನ; ಮೇಕೆದಾಟು, ನೀರಿನ ಪಾಲಿಗೆ ಬದ್ಧತೆ
"ರಾಜ್ಯದ ನೀರಾವರಿ ಸಚಿವನಾಗಿ ಹಾಗೂ ಕಾವೇರಿ ತಾಯಿಯ ಮಡಿಲಾದ ಹಳೆ ಮೈಸೂರು ಭಾಗದ ಜನಪ್ರತಿನಿಧಿಯಾಗಿ ನಾನು ಸಂವಿಧಾನವನ್ನ ರೈತರ ಕಣ್ಣಲ್ಲಿ ನೋಡುತ್ತೇನೆ. ದೇಶದ ನೈಸರ್ಗಿಕ ಸಂಪನ್ಮೂಲಗಳು ಕೇವಲ ಕೆಲವೇ ಬಂಡವಾಳಶಾಹಿಗಳ ಪಾಲಾಗದೆ, ಕಟ್ಟಕಡೆಯ ರೈತನ ಹೊಲಕ್ಕೂ ನ್ಯಾಯಯುತವಾಗಿ ಹಂಚಿಕೆಯಾಗಬೇಕು. ಕಾವೇರಿ ಕೊಳ್ಳದ ರೈತರ ಹಿತಾಸಕ್ತಿ ರಕ್ಷಣೆ, ಮೇಕೆದಾಟು ಯೋಜನೆಯ ಅನುಷ್ಠಾನ ಹಾಗೂ ಉತ್ತರ ಕರ್ನಾಟಕದಿಂದ ಬಯಲುಸೀಮೆಯ ಬರಪೀಡಿತ ಹಳ್ಳಿಗಳವರೆಗೆ ಪ್ರತಿ ಎಕರೆಗೂ ನೀರು ಹರಿಸಲು ಸರ್ಕಾರ ಕಟಿಬದ್ಧವಾಗಿದೆ," ಎಂದು ಭರವಸೆ ನೀಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ನೀರಿನ ಪಾಲು ಮತ್ತು ತೆರಿಗೆಯ ಪಾಲಿಗಾಗಿ ಸಂವಿಧಾನಾತ್ಮಕ ಹೋರಾಟ ಮುಂದುವರಿಯಲಿದೆ ಎಂದರು.ಬಸವಣ್ಣನವರ ಸಮಾನತೆಯ ತತ್ವ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ನ್ಯಾಯದ ಪರಂಪರೆ, ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಅಂಬೇಡ್ಕರ್ ಅವರ ಸಂವಿಧಾನ ನಮಗೆ ದಾರಿದೀಪವಾಗಲಿ ಎಂದು ಆಶಿಸಿದ ಸಚಿವರು, ಸುಳ್ಳು ಸುದ್ದಿಗಳು ಮತ್ತು ವಿಭಜಕ ಶಕ್ತಿಗಳಿಗೆ ಕಿವಿಗೊಡದೆ ಸಂವಿಧಾನವನ್ನ ಉಳಿಸಿಕೊಳ್ಳುವ ಸಂಕಲ್ಪ ಮಾಡುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಪ್ರಧಾನ ಭಾಷಣಕಾರರಾದ ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸದಸ್ಯರು, ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
ಸಂಬಂಧಿತ ಸುದ್ದಿಗಳು

ದೆಹಲಿ ಮೃಗಾಲಯದಲ್ಲಿ ಜೀವವೈವಿಧ್ಯದ ಅನಾವರಣ
ನವದೆಹಲಿ : ಇಲ್ಲಿನ ರಾಷ್ಟ್ರೀಯ ಪ್ರಾಣಿ ಉದ್ಯಾನವನದಲ್ಲಿ (ದೆಹಲಿ ಮೃಗಾಲಯ) ಆಯೋಜಿಸಲಾಗಿದ್ದ 22ನೇ 'ಸಂಡೇ ಬರ್ಡ್ ವಾಕ್ @ ಎನ್ಝಡ್ಪ…
◷ 27/11/2026
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ : ಕ್ಷೇತ್ರ ಪುನರ್ವಿಂಗಡಣೆಗೆ (Delimitation) ಸಂಬಂಧಿಸಿದ ಹೊಸ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾ…
◷ 27/11/2026
ಎಸ್ಐಟಿ ರಚನೆ ಮಾಡಿದ್ದೇ ಕ್ಲೀನ್ ಚಿಟ್ ಕೊಡಿಸಿಕೊಳ್ಳಲು ಎಂಬುದು ಸಾಬೀತಾಗಿದೆ :
ಬೆಂಗಳೂರು : ಕಾಂಗ್ರೆಸ್ ಪಕ್ಷವು ಇತಿಹಾಸವನ್ನು ಅಳಿಸುವ ಕೆಲಸ ಮಾಡುತ್ತಿದೆ. ಯಾವುದೇ ವಿಚಾರಣೆ (ಎನ್ಕ್ವೈರಿ) ಅಥವಾ ತನಿಖೆ ನಡೆಯದೆಯ…
◷ 27/11/2026
ವಾರದ ಅಂತ್ಯದ ವಹಿವಾಟಿನಲ್ಲಿ ಷೇರುಪೇಟೆಗೆ ಕುಸಿತದ ಬಿಸಿ ; ಸೆನ್ಸೆಕ್ಸ್ 989 ಅಂಕ ಕುಸಿತ, ನಿಫ್ಟಿ ಶೇ. 1ಕ್ಕಿಂತ ಹೆಚ್ಚು ಇಳಿಕೆ
ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ (ಕ್ರೂಡ್ ಆಯಿಲ್) ಬೆಲೆ ಏರಿಕೆಯಾಗಿದ್ದು, ಇದರ ನ…
◷ 27/11/2026
