ಮೈಸೂರು: ಸಂವಿಧಾನವು ನಮ್ಮೆಲ್ಲರ ನ್ಯಾಯದ ಆಧಾರ, ಸಮಾನತೆಯ ಭಂಡಾರ ಹಾಗೂ ಪ್ರಜಾಪ್ರಭುತ್ವಕ್ಕೆ ಶಕ್ತಿಯ ಸಂಚಾರವಾಗಿದೆ  ಇದು ನಮ್ಮೆಲ್ಲರ ಪಾಲಿಗೆ ಪವಿತ್ರ ಗ್ರಂಥವಾಗಿದ್ದು, ದೇಶದ ಒಂದು ಅಂತರಾತ್ಮದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಹೇಳಿದರು.ಇಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಾತ್ಮ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರ ಮಾರ್ಗದರ್ಶನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ನಮಗೆ ಬದುಕಿನ ಹಕ್ಕು ಮತ್ತು ನ್ಯಾಯವನ್ನು ನೀಡಿದ್ದಾರೆ ಎಂದು ಗೌರವ ಸಲ್ಲಿಸಿದರು.ಪ್ರತಿಯೊಬ್ಬರ ಬದುಕಿನಲ್ಲಿಯೂ ದೀಪ ಬೆಳಗಬೇಕು ಮತ್ತು ಶೋಷಿತರು ಹಾಗೂ ವಿದ್ಯಾವಂತರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಪ್ರಧಾನಮಂತ್ರಿಯ ಮತದ ಮೌಲ್ಯ ಎಷ್ಟಿದೆಯೋ, ಸಾಮಾನ್ಯ ವ್ಯಕ್ತಿ ಮತ್ತು ಪಂಚಾಯತ್ ಸದಸ್ಯನ ಮತದ ಮೌಲ್ಯವೂ ಅಷ್ಟೇ ಇದೆ ಎಂಬುದೇ ದೇಶದ ದೊಡ್ಡ ಆಸ್ತಿ ಎಂದು ತಿಳಿಸಿದರು.ಶ್ರೀಮಂತರು ಮತ್ತು ಬಡವರಿಗೆ ಒಂದೇ ಕಾನೂನು ಮತ್ತು ಒಂದೇ ನ್ಯಾಯವಿದೆ. ಸಂವಿಧಾನದ ಆಶಯದಂತೆ ನ್ಯಾಯ ಪಡೆಯುವ ಹಕ್ಕು ಎಲ್ಲರಿಗೂ ಇದ್ದು, ಸಂವಿಧಾನವನ್ನು ಉಳಿಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.  ಸಂವಿಧಾನವು ಕೇವಲ ಲಿಖಿತ ದಾಖಲೆಯಲ್ಲ, ನಮ್ಮ ಜೀವಂತ ಗ್ರಂಥ:  ಡಾ. ಯತೀಂದ್ರ ಸಿದ್ದರಾಮಯ್ಯ

ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ ಸಂವಿಧಾನವು ಕೇವಲ ಲಿಖಿತ ದಾಖಲೆಯಲ್ಲ, ಅದೊಂದು ಜೀವಂತ ಗ್ರಂಥ. ಇದನ್ನು ಗೌರವಿಸುವುದು ಮತ್ತು ಚಾಚೂತಪ್ಪದೆ ಪಾಲಿಸುವುದನ್ನು ಎಲ್ಲರೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಕಳೆದ ಮೂರು ವರ್ಷಗಳಿಂದ ವಿಧಾನಸೌಧದ ಮೆಟ್ಟಿಲುಗಳ ಬಳಿ ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿತ್ತು; ಆದರೆ ಈ ಬಾರಿ ಮೈಸೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಹಿಂದೆ "ಧರ್ಮೋ ರಕ್ಷತಿ ರಕ್ಷಿತಃ" ಎನ್ನುತ್ತಿದ್ದರು; ಆದರೆ ಆಧುನಿಕ ಕಾಲದಲ್ಲಿ ನಾವು ಸಂವಿಧಾನವನ್ನು ರಕ್ಷಿಸಿದರೆ ಮಾತ್ರ ನಾವೆಲ್ಲರೂ ಸುರಕ್ಷಿತವಾಗಿರಲು ಸಾಧ್ಯ. ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು ಮತ್ತು ಸ್ವಾಭಿಮಾನದ ಬದುಕಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಆಧಾರ ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದೀಯ ಮಂಡಳಿ ಸದಸ್ಯರು, ನಿಕಟಪೂರ್ವ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ ಎಚ್ ಮುನಿಯಪ್ಪ, ಕೆ ಎಸ್ ಬಸವಂತಪ್ಪ, ನರೇಂದ್ರಸ್ವಾಮಿ,‌ ಟಿ ರಘುಮೂರ್ತಿ,‌ ಸತೀಶ್ ಜಾರಕಿಹೊಳಿ, ಪುಟ್ಟರಂಗಶೆಟ್ಟಿ,  ರಿಜ್ವಾನ್ ಹರ್ಷದ್, ಕೆ ಎಂ ಶಿವಲಿಂಗೇಗೌಡ, ಯು ಟಿ ಖಾದರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎ ಎಸ್ ಪೊನ್ನಣ್ಣ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ,‌ ಮುಖ್ಯಮಂತ್ರಿಯವರ ಮುಖ್ಯ ಸಲಹೆಗಾರ ಜಿ‌ ಸಿ ಚಂದ್ರಶೇಖರ್, ಸಂಸದರಾದ ಸುನೀಲ್ ಬೋಸ್,‌ ಶ್ರೇಯಸ್ ಪಟೇಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್, ಶಾಸಕರಾದ ಎಚ್ ಸಿ ಮಹದೇವಪ್ಪ,  ತನ್ವೀರ್ ಸೇಠ್, ಕೆ ವೆಂಕಟೇಶ್, ಡಿ ರವಿಶಂಕರ್, ಅನಿಲ್ ಚಿಕ್ಕಮಾದು, ಎ ಆರ್ ಕೃಷ್ಣಮೂರ್ತಿ, ಹರೀಶ್ ಗೌಡ, ಗಣೇಶ್ ಪ್ರಸಾದ್, ಮಂಥರ್ ಗೌಡ, ಗಣಿಗ ರವಿಕುಮಾರ್, ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಡಾ ಡಿ ತಿಮ್ಮಯ್ಯ, ಶಿವಕುಮಾರ್ ಕೆ, ಶ್ರೀನಿವಾಸ್, ಶಿವಣ್ಣ, ವಸಂತ್ ಕುಮಾರ್,ಸೇರಿದಂತೆ ಹಲವು ಗಣ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು,ಮತ್ತಿತರರು ಉಪಸ್ಥಿತರಿದ್ದರು.