ಆಕ್ಲೆಂಡ್‌ :  ಆಕ್ಲೆಂಡ್‌ನ ಲಾಯ್ಡ್ ಎಲ್ಸ್‌ಮೋರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ '2026 ಭಾರತ-ನ್ಯೂಜಿಲೆಂಡ್ ಕ್ರೀಡಾ ಏಕತೆಯ ಶತಮಾನೋತ್ಸವ ಸರಣಿ'ಯ ಅಂತಿಮ ಪಂದ್ಯವು 2-2 ಗೋಲುಗಳ ಡ್ರಾನಲ್ಲಿ ಅಂತ್ಯಗೊಂಡಿದ್ದು, ಭಾರತೀಯ ಪುರುಷರ ಹಾಕಿ ತಂಡವು 1-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.ನಿನ್ನೆ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ, ಆತಿಥೇಯ ನ್ಯೂಜಿಲೆಂಡ್‌ನ ಡೈಲನ್ ಥಾಮಸ್ 9ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ ಇದಕ್ಕೆ ತಕ್ಷಣವೇ ಪ್ರತ್ಯುತ್ತರ ನೀಡಿದ ಭಾರತ, ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿ ತಿರುಗೇಟು ನೀಡಿತು. 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಂಜಯ್ ಪಂದ್ಯವನ್ನು ಸಮಬಲಗೊಳಿಸಿದರೆ, 18ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಫೀಲ್ಡ್ ಗೋಲು ಬಾರಿಸಿ ಭಾರತಕ್ಕೆ 2-1ರ ಮುನ್ನಡೆ ಒದಗಿಸಿದರು.ಅಂತಿಮ ಕ್ವಾರ್ಟರ್‌ನಲ್ಲಿ ತೀವ್ರ ಪೈಪೋಟಿ ನೀಡಿದ ನ್ಯೂಜಿಲೆಂಡ್ ಪರ ಬೆಂಜಿ ಕುಲ್ಹೇನ್ 55ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ಮತ್ತೆ ಸಮಬಲಕ್ಕೆ ತಂದರು. ಆ ಬಳಿಕ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗದ ಕಾರಣ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ಇದರೊಂದಿಗೆ ಭಾರತ ಸರಣಿ ವಿಜೇತವಾಗಿ ಹೊರಹೊಮ್ಮಿತು.ಸರಣಿಯ ಮೊದಲ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ರೋಚಕ ಜಯ ಸಾಧಿಸಿತ್ತು ಮತ್ತು ಎರಡನೇ ಪಂದ್ಯವು 2-2ರಿಂದ ಡ್ರಾ ಆಗಿತ್ತು.

ಶತಮಾನದ ಕ್ರೀಡಾ ಬಾಂಧವ್ಯ

ಈ ಸರಣಿಯು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 100 ವರ್ಷಗಳ ಕ್ರೀಡಾ ಬಾಂಧವ್ಯದ ಸ್ಮರಣಾರ್ಥವಾಗಿ ಆಯೋಜನೆಗೊಂಡಿತ್ತು. 1926ರಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರನ್ನೊಳಗೊಂಡ ಭಾರತೀಯ ಸೇನೆಯ ಹಾಕಿ ತಂಡವು ಮೊದಲ ಬಾರಿಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಆ ಐತಿಹಾಸಿಕ ಪ್ರವಾಸಕ್ಕೆ ಈಗ ನೂರು ವರ್ಷ ತುಂಬಿದೆ.