ಬೆಂಗಳೂರು: ‘ಯುಐ’   ಸಿನಿಮಾದ ಬಳಿಕ ಕೇವಲ ನಟನೆಯಲ್ಲಿ ಬ್ಯುಸಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ, ಮತ್ತೆ ನಿರ್ದೇಶಕನ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ. “ಮುಂದಿನ ನಿರ್ದೇಶನ ಯಾವಾಗ?” ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ವತಃ ಉಪ್ಪಿಯವರೇ ಸಿಹಿಸುದ್ದಿ ನೀಡಿದ್ದು, ಸದ್ಯ ಹೊಸ ಕಥೆಯ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಉಪೇಂದ್ರ, “ನಾನು ಈಗ ಹೊಸ ಸ್ಕ್ರಿಪ್ಟ್ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯ ನನ್ನ ಕೈಯಲ್ಲಿರುವ ಎರಡು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳ್ಳಬೇಕಿದೆ. ಆ ಬಳಿಕ ನನ್ನ ನಿರ್ದೇಶನದ ಹೊಸ ಸಿನಿಮಾ ಕೆಲಸಗಳು ಅಧಿಕೃತವಾಗಿ ಶುರುವಾಗಲಿವೆ. ಸಿನಿಮಾ ಘೋಷಣೆ ಮಾಡಿದ ತಕ್ಷಣವೇ ನಿಮಗೆ ಕಥೆಯ ಸುಳಿವು ಸಿಗಲಿದೆ” ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.

ಮಗನ ಮೊದಲ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ನಿರ್ದೇಶನ!

ಇದೇ ವೇಳೆ ಪುತ್ರ ಆಯುಷ್ ಸಿನಿಮಾ ಎಂಟ್ರಿಯ ಬಗ್ಗೆಯೂ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಆಯುಷ್ ಅಭಿನಯದ ಚೊಚ್ಚಲ ಸಿನಿಮಾದ ಕಥೆಯ ಚರ್ಚೆಯಲ್ಲಿ ಉಪ್ಪಿ ಕೂಡ ಭಾಗಿಯಾಗಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಮೂಲಕ ಅವರು ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ.ನಟನೆಯಲ್ಲಿಯೂ ಬ್ಯುಸಿಯಾಗಿರುವ ಅವರು ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಹೊಸ ಚಿತ್ರದಲ್ಲಿ  ನಟಿಸುತ್ತಿದ್ದಾರೆ. ಹುಲಿವೇಷ ಕಲೆಯ ಹಿನ್ನೆಲೆಯುಳ್ಳ ಈ ಚಿತ್ರದ ಶೂಟಿಂಗ್‌ಗಾಗಿ ಅವರು ಚಿಕ್ಕಮಗಳೂರಿನಿಂದ ಕೊಡೈಕೆನಾಲ್‌ಗೆ ತೆರಳಿದ್ದಾರೆ. ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅಥರ್ವ ಕೂಡ ನಟಿಸುತ್ತಿದ್ದು, ಬರೋಬ್ಬರಿ 24 ವರ್ಷಗಳ ಬಳಿಕ ಉಪೇಂದ್ರ ಮತ್ತು ಪ್ರಭುದೇವ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರುತ್ತಿರುವ ಆ್ಯಕ್ಷನ್ ಡ್ರಾಮಾ ‘ನೆಕ್ಸ್ಟ್ ಲೆವೆಲ್’ ಚಿತ್ರದಲ್ಲೂ ಉಪ್ಪಿ ನಟಿಸುತ್ತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನ ಹಾಗೂ ತರುಣ್ ಶಿವಪ್ಪ ನಿರ್ಮಾಣದ ಈ ಚಿತ್ರದಲ್ಲಿ ಆರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಇದೇ ಮೊದಲ ಬಾರಿಗೆ ತಮ್ಮ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಜೊತೆ ಉಪೇಂದ್ರ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷವಾಗಿದೆ.