ಇತಿಹಾಸ ಸೃಷ್ಟಿಸಿದ ಭಾರತೀಯ ಮಹಿಳಾ ಹಾಕಿ ತಂಡ : ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ 5ನೇ ಸ್ಥಾನಕ್ಕೆ ಲಗ್ಗೆ

ಭೋಪಾಲ್ : ಭಾರತೀಯ ಮಹಿಳಾ ಹಾಕಿ ತಂಡವು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಐದನೇ ಸ್ಥಾನಕ್ಕೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಮಂಗಳವಾರ ಭೋಪಾಲ್‌ನ ನಾಥು ಬರ್ಖೇಡಾದಲ್ಲಿರುವ ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ 'ಮಧ್ಯಪ್ರದೇಶ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026' ಪಂದ್ಯಾವಳಿಯಲ್ಲಿ ಚೀನಾ ತಂಡವನ್ನು 6-2 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದ ಬೆನ್ನಲ್ಲೇ ಭಾರತ ತಂಡ ಈ ಐತಿಹಾಸಿಕ ಸಾಧನೆ ಮಾಡಿದೆ.ಇದು ಭಾರತೀಯ ಮಹಿಳಾ ಹಾಕಿ ತಂಡದ ಸಾರ್ವಕಾಲಿಕ ಶ್ರೇಷ್ಠ ವಿಶ್ವ ರ‍್ಯಾಂಕಿಂಗ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡದ ಸ್ಥಿರ ಪ್ರದರ್ಶನ ಮತ್ತು ಹೆಚ್ಚುತ್ತಿರುವ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಅಕ್ಟೋಬರ್ 2003ರಲ್ಲಿ ಎಫ್‌ಐಎಚ್ ವಿಶ್ವ ರ‍್ಯಾಂಕಿಂಗ್ ಆರಂಭವಾದಾಗಿನಿಂದ ಭಾರತೀಯ ಮಹಿಳಾ ತಂಡ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಪ್ರಗತಿ ಸಾಧಿಸುತ್ತಾ ಬಂದಿದೆ. ಈ ಹಿಂದೆ ಮೇ-ಜೂನ್ 2022ರ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿನ ಅಮೋಘ ಪ್ರದರ್ಶನದ ನಂತರ ತಂಡವು ಆರನೇ ಸ್ಥಾನಕ್ಕೆ ಏರಿದ್ದೇ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. 2023ರಲ್ಲೂ ತಂಡ ಆರನೇ ಸ್ಥಾನವನ್ನು ತಲುಪಿತ್ತು. ಇದಕ್ಕೂ ಮುನ್ನ ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಬಳಿಕ 8ನೇ ರ‍್ಯಾಂಕಿಂಗ್ ಹಾಗೂ 2018ರ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದಾಗ 9ನೇ ರ‍್ಯಾಂಕಿಂಗ್ ಪಡೆದಿತ್ತು.2026ರ ವರ್ಷವು ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಹಲವು ಐತಿಹಾಸಿಕ ಗೆಲುವುಗಳ ವರ್ಷವಾಗಿದೆ. ವರ್ಷದ ಆರಂಭದಲ್ಲಿ ಎಫ್‌ಐಎಚ್ ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡ, ನಂತರ ಎಫ್‌ಐಎಚ್ ನೇಷನ್ಸ್ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕೋಚ್ ಸ್ಜೋರ್ಡ್ ಮರಿಜ್ನೆ (Sjoerd Marijne) ಮಾರ್ಗದರ್ಶನದಲ್ಲಿ ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ 5ನೇ ಸ್ಥಾನ ಪಡೆಯುವ ಮೂಲಕ, 1974ರ ನಂತರ ಈ ಟೂರ್ನಿಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 44 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದೆ. ಈ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೂ ನೇರ ಅರ್ಹತೆ ಗಿಟ್ಟಿಸಿಕೊಂಡಿತು. ಈ ಐತಿಹಾಸಿಕ ಸಾಧನೆಗೆ ತಂಡವನ್ನು ಅಭಿನಂದಿಸಿರುವ ಹಾಕಿ ಇಂಡಿಯಾ ಅಧ್ಯಕ್ಷ ಡಾ. ದಿಲೀಪ್ ಟಿರ್ಕಿ, "ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನಕ್ಕೇರಿರುವುದು ಭಾರತೀಯ ಹಾಕಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಇದು ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿಯ ಕಠಿಣ ಪರಿಶ್ರಮ ಹಾಗೂ ಬದ್ಧತೆಗೆ ಸಿಕ್ಕ ಫಲ," ಎಂದು ಶ್ಲಾಘಿಸಿದ್ದಾರೆ.ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಮಾತನಾಡಿ, "ಇದು ಪ್ರತಿಯೊಬ್ಬ ಭಾರತೀಯ ಹಾಕಿ ಅಭಿಮಾನಿಯೂ ಸಂಭ್ರಮಿಸುವ ಐತಿಹಾಸಿಕ ಸಂದರ್ಭ. ಆಟಗಾರ್ತಿಯರು ವರ್ಷಪೂರ್ತಿ ಅತ್ಯದ್ಭುತ ದೃಢಸಂಕಲ್ಪ ತೋರಿದ್ದಾರೆ. ಮುಂಬರುವ ವರ್ಷಗಳಲ್ಲಿ ತಂಡ ಇನ್ನೂ ಹೆಚ್ಚಿನ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನಕ್ಕೇರಿರುವ ಹುಮ್ಮಸ್ಸಿನಲ್ಲಿರುವ ಭಾರತೀಯ ವನಿತೆಯರು, ಇದೇ ಗೆಲುವಿನ ಲಯವನ್ನು ಮುಂದುವರಿಸಿ ಈ ಸ್ಮರಣೀಯ ವರ್ಷದಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದ್ದಾರೆ.
ಸಂಬಂಧಿತ ಸುದ್ದಿಗಳು

ಪ್ರೊ ರೆಸ್ಲಿಂಗ್ ಲೀಗ್ (PWL) 6ನೇ ಆವೃತ್ತಿ : ದೆಹಲಿಯಲ್ಲಿ ಪಂದ್ಯಾವಳಿ, ನವೆಂಬರ್ 30ರಂದು ಆಟಗಾರರ ಹರಾಜು
ನವದೆಹಲಿ : ಪ್ರೊ ರೆಸ್ಲಿಂಗ್ ಲೀಗ್ (ಪಿಡಬ್ಲ್ಯೂಎಲ್) ತನ್ನ ಆರನೇ ಆವೃತ್ತಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2027ರ ಜನ…
◷ 24/11/2026
ನ್ಯೂಜಿಲೆಂಡ್ ವಿರುದ್ಧದ ಹಾಕಿ ಸರಣಿಯನ್ನು 1-0 ಅಂತರದಿಂದ ಗೆದ್ದ ಭಾರತ
ಆಕ್ಲೆಂಡ್ : ಆಕ್ಲೆಂಡ್ನ ಲಾಯ್ಡ್ ಎಲ್ಸ್ಮೋರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ '2026 ಭಾರತ-ನ್ಯೂಜಿಲೆಂಡ್ ಕ್ರೀಡಾ ಏ…
◷ 24/11/2026
ಪೊಲೀಸ್ ಇಲಾಖೆಯ ಸೇವೆ, ಶಿಸ್ತು ಮತ್ತು ತ್ಯಾಗ ಸಮಾಜಕ್ಕೆ ಮಾದರಿ : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ
ಧಾರವಾಡ : ಸಮಾಜದ ಸುರಕ್ಷತೆಗಾಗಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವೆ ಅತ್ಯ…
◷ 23/11/2026
ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ!
ಬೇಸಿನ್ ರಿಸರ್ವ್ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಐದನೇ ದಿನದಾಟದಲ್ಲಿ ನ್ಯೂ…
◷ 23/11/2026
