ಚಾಮರಾಜನಗರ : ಕನ್ನಡ ಚಲನಚಿತ್ರ ರಂಗದ ಶ್ರೇಷ್ಠ ನಟರಾಗಿ, ನಿರ್ದೇಶಕರಾಗಿ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ಚಾಪನ್ನು ಮೂಡಿಸಿ ಭಾರತೀಯ ಚಿತ್ರರಂಗಕ್ಕೆ ಕನ್ನಡಿಗರ ಕೊಡುಗೆ ನೀಡಿದ ಶಂಕರ್ ನಾಗ್ ಅವರು ಸದಾ ಕಾಲ ಕನ್ನಡಿಗರ ಹೃದಯದಲ್ಲಿ ನೆಲೆಸಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಸುರೇಶ್. ಎನ್. ಋಗ್ವೇದಿ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಶಂಕರ್ ನಾಗ್ ಜನ್ಮ ದಿನಾಂಕದಲ್ಲಿ ಶಂಕರ್ ನಾಗ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡುತ್ತ ಶಂಕರ್ ನಾಗ್ ಜ್ಞಾನಕ್ಕೆ ಮತ್ತೊಂದು ಹೆಸರು. ಅಪಾರ ಬುದ್ಧಿವಂತರಾಗಿ ತಮ್ಮ ದೂರದೃಷ್ಟಿ ಮತ್ತು ಕ್ರಿಯಾಶಕ್ತಿಯಿಂದ ಅತ್ಯಂತ ಪರಿಶ್ರಮ ಮತ್ತು ಸಹಜ ಅಭಿನಯದಿಂದ  ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗನ್ನು ನೀಡಿದವರು. ಅವರ ಮಿಂಚಿನ ಓಟ, ಆಕ್ಸಿಡೆಂಟ್,ಒಂದು ಮುತ್ತಿನ ಕಥೆ,ಸಾಂಗ್ಲಿಯಾನ, ಆಟೋ ರಾಜ ಮುಂತಾದ ಚಿತ್ರಗಳು ಇಂದಿಗೂ ಜೀವಂತಿಕೆಯನ್ನು ಪಡೆದಿದೆ. ಶಂಕರ್ ನಾಗ್ ಅವರ ಸಾಂಗ್ಲಿಯಾನದ ಆ ಪಾತ್ರದಿಂದಲೇ ನೂರಾರು ಯುವಕರು ಪೊಲೀಸ್ ಇಲಾಖೆಗೆ ಸೇರಿ  ಭ್ರಷ್ಟಾಚಾರವನ್ನು ಮತ್ತು ಸಮಾಜದ ಅನುಕೂಲಕ್ಕೆ ಪೊಲೀಸ್ ಇಲಾಖೆಗೆ ಸೇರಿದ ನಿದರ್ಶನಗಳಿವೆ . ಒಂದು ಮುತ್ತಿನ ಕಥೆ ಮತ್ತು ಕಿರುತೆರೆಯ ಮಾಲ್ಗುಡಿ ಡೇಸ್ ಇಡಿ ದೇಶದಲ್ಲಿ ಅವರ ಪ್ರತಿಭೆಯನ್ನು ಮತ್ತು ಚಿಂತನೆಯ ದೃಷ್ಟಿಕೋನವನ್ನು ಬಹು ಎತ್ತರಕ್ಕೆ ನಿಲ್ಲಿಸಿತು.ಶಂಕರ್ ನಾಗ್ ಆಟೋ ರಾಜ ಮೂಲಕ ಭಾರತದ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರಿಗೆ ಗೌರವ ಸ್ಥಾನವನ್ನು ತಂದುಕೊಟ್ಟ ನಟ ಎಂದು ಋಗ್ವೇದಿ ತಿಳಿಸಿದರು. ಜನಪದ ಗಾಯಕ,  ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಗ್ ಹರದನಹಳ್ಳಿ   ಮಾತನಾಡಿ ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಶಂಕರ್ ನಾಗ್ ಅವರ ಜನ್ಮ ದಿನಾಂಕವನ್ನು ಆಚರಿಸುವ ಮೂಲಕ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.ಶಂಕರ್ ನಾಗ್ ‌  ನಮ್ಮೆಲ್ಲರಿಗೂ ಆದರ್ಶವಾದ ಮಾರ್ಗದಲ್ಲಿ ನಡೆಯಲು ತಮ್ಮ ಚಿತ್ರಗಳ ಮೂಲಕ ಪ್ರೇರಣೆಯನ್ನು ನೀಡಿದವರು. ಕನ್ನಡ ಚಿತ್ರರಂಗ ಇಂದು ಭಾರತೀಯ ಚಿತ್ರರಂಗದಲ್ಲಿ ಉಜ್ವಲ ಸ್ಥಾನದಲ್ಲಿ ಇರಲು ಶಂಕರ್ ಅವರ ಕೊಡುಗೆ ಅಪಾರವಾಗಿದೆ ಎಂದರು.ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ   ಪಾರ್ವತಮ್ಮ   ಮಾತನಾಡಿ ಶಂಕರ್ ನಾಗ್ ನಮಗೆಲ್ಲರಿಗೂ ಪ್ರೇರಣೆ, ಸ್ಪೂರ್ತಿ ನೀಡಿದವರು. ಸದಾಕಾಲ ಕ್ರಿಯಾತ್ಮಕವಾಗಿ ಕರ್ತವ್ಯದ ಮೂಲಕ ಮತ್ತು ಹೊಸ ದೃಷ್ಟಿಕೋನದ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸಿದವರು.ಶಂಕರ್ ನಾಗ್ ಅವರ ಹೆಸರನ್ನು  ಮಕ್ಕಳಿಗೆ ಇಟ್ಟುಕೊಳ್ಳುವ ಮೂಲಕ ಗೌರವಿಸುತ್ತಿರುವುದು ಅವರ ಚಲನಚಿತ್ರದ ಪ್ರಭಾವವನ್ನು ಕಾಣಬಹುದು. ನಾವೆಲ್ಲರೂ ಸದಾ ಕಾಲ ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವೆ ಎಂದರು. ಶಂಕರ್ ನಾಗ್ ಅವರ ಗೀತ ಗಾಯನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಸುರೇಶ ನಾಗ್, ಕಾಗಲವಾಡಿ ರಂಗಸ್ವಾಮಿ, ಮಹಮದ್ ಗೌಸ್, ಶಿವಲಿಂಗ ಮೂರ್ತಿ ಎಲ್, ನಾಗೇಶ್, ಶಂಕರ್ ನಾಗ್ ಅವರ ಗೀತೆಗಳು ಹಾಡುವ ಮೂಲಕ ಗಮನಸೆಳೆದರು. ಕಾರ್ಯಕ್ರಮದಲ್ಲಿ ನಾಸಿರ ಬೇಗಂ, ನಿಸಾರ್ ಅಹಮದ್ ವೀರಶೆಟ್ಟಿ,  ನಾಗಮ್ಮ ಮುಂತಾದವರು ಉಪಸ್ಥಿತರಿದ್ದರು.