ಪಣಜಿ :  ಗೋವಾದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಇಫ್ಫಿ - IFFI) ಶುಕ್ರವಾರ (ನವೆಂಬರ್ 20, 2026) ಅದ್ದೂರಿಯಾಗಿ ಆರಂಭವಾಯಿತು. 86 ದೇಶಗಳ ಭಾಗವಹಿಸುವಿಕೆ ಮತ್ತು 150ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನದೊಂದಿಗೆ ಆರಂಭಗೊಂಡ ಈ ಉತ್ಸವವು ಸಿನಿಮಾ ಪ್ರೇಮಿಗಳು, ನಿರ್ದೇಶಕರು ಮತ್ತು ಕಲಾವಿದರನ್ನು ಒಂದೆಡೆ ಸೇರಿಸಿದೆ.‘ಸ್ಟೋರೀಸ್ ವಿದೌಟ್ ಬಾರ್ಡರ್ಸ್’ (ಗಡಿಗಳಿಲ್ಲದ ಕಥೆಗಳು) ಎಂಬ ಥೀಮ್ ಆಧಾರಿತ ಈ ಆವೃತ್ತಿಯು ಭೌಗೋಳಿಕ ಗಡಿಗಳನ್ನು ಮೀರಿ, ಸಾಂಸ್ಕೃತಿಕ ಅಂತರಗಳನ್ನು ಅಳಿಸಿಹಾಕುವ ಸಿನಿಮಾದ ಶಕ್ತಿಯನ್ನು ಸಂಭ್ರಮಿಸುತ್ತಿದೆ.  ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾದ ಸಾರ್ವತ್ರಿಕ ಭಾಷೆಯನ್ನು ಬಿಂಬಿಸುವ ಹಲವು ವೈವಿಧ್ಯಮಯ ಪ್ರಸ್ತುತಿಗಳು ಕಂಡುಬಂದವು. ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ನೇತೃತ್ವದಲ್ಲಿ ‘ಸಂಗೀತದ ಮೂಲಕ ಸಿನಿಮಾದ ಜಗತ್ತು’ ವಿಷಯದಡಿ ನಡೆದ ಸಿಂಫನಿ ಆರ್ಕೆಸ್ಟ್ರಾ ಪ್ರೇಕ್ಷಕರನ್ನು ವಿಭಿನ್ನ ಸಂಸ್ಕೃತಿಗಳ ಸಂಗೀತ ಪಯಣಕ್ಕೆ ಕರೆದೊಯ್ಯಿತು. ಸಂಜೆಯ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಕಲಾವಿದರನ್ನೊಳಗೊಂಡ ‘ಮ್ಯೂಸಿಕ್ ವಿದೌಟ್ ಬಾರ್ಡರ್ಸ್’ ಅಂತರರಾಷ್ಟ್ರೀಯ ಸಂಗೀತ ಸಂಯೋಜನೆ ಪ್ರದರ್ಶನಗೊಂಡಿತು.ಇಫ್ಫಿಯ ನವಿಲು ಲಾಂಛನವನ್ನು ‘ಬಿಯಾಂಡ್ ದ ಫ್ರೇಮ್’ ಎಂಬ ವಿಶೇಷ ನೃತ್ಯ ರೂಪಕದ ಮೂಲಕ ಮನಮೋಹಕವಾಗಿ ಪ್ರಸ್ತುತಪಡಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಸಭಾ ಸಂಸದ ಸದಾನಂದ ಮ್ಹಾಲು ಶೇಟ್ ತಾನಾವಡೆ, ಶಾಸಕಿ ಹಾಗೂ ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾ ಉಪಾಧ್ಯಕ್ಷೆ ಡೆಲಿಲಾ ಲೋಬೊ, ಗೋವಾ ಮುಖ್ಯ ಕಾರ್ಯದರ್ಶಿ ಡಾ. ವಿ. ಕ್ಯಾಂಡ್ವೆಲು, ಎನ್‌ಎಫ್‌ಡಿಸಿ ಅಧ್ಯಕ್ಷ ಜಿ. ಕೃಷ್ಣಕುಮಾರ್, ಪ್ರಸಾರ ಭಾರತಿ ಅಧ್ಯಕ್ಷ ಪ್ರಸೂನ್ ಜೋಶಿ, ಎನ್‌ಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಧೀರಜ್ ಸಿಂಗ್ ಹಾಗೂ ಇಎಸ್‌ಜಿ ಸಿಇಒ ದೀಪಕ್ ಬಾಂದೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.