ಹನೂರು: ಮಲೆ ಮಹದೇಶ್ವರ ಬೆಟ್ಟದ ಅಂತರರಾಜ್ಯ ಲೋಕೋಪಯೋಗಿ ಇಲಾಖೆ (PWD) ರಸ್ತೆಯಲ್ಲಿ ವಾಹನ ಸವಾರರಿಂದ ವಾಹನ ಶುಲ್ಕ ವಸೂಲಿ ಮಾಡುವುದನ್ನು ವಿರೋಧಿಸಿ ಹಾಗೂ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಸುತ್ತಮುತ್ತಲಿನ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲೂಕು ಶಾಖೆಯ ವತಿಯಿಂದ ಶುಲ್ಕ ವಸೂಲಾತಿ ಕೇಂದ್ರದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಜನರ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ 15ನೇ ಶತಮಾನದಲ್ಲಿ ಮಲೆ ಮಹದೇಶ್ವರ ಸ್ವಾಮಿಗಳು ನೆಲೆಸಿದ್ದರು. ಅಂದಿನಿಂದಲೂ ಭಕ್ತರು ಯಾವುದೇ ಅಧಿಕ ವೆಚ್ಚವಿಲ್ಲದೆ ಭಕ್ತಿಯಿಂದ ಸ್ವಾಮಿಯ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಆರಂಭವಾದ ನಂತರ ಭಕ್ತರಿಂದ ವಿವಿಧ ಸೇವೆಗಳ ಹೆಸರಿನಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರ ಜೊತೆಗೆ ತಮಿಳುನಾಡು ಹಾಗೂ ಗೋಪಿನಾಥಂ ಕಡೆಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕರ ಬಳಕೆಯಲ್ಲಿರುವ PWD ರಸ್ತೆಯಲ್ಲಿಯೂ ವಾಹನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ಹಿಂದೆ ಇದೇ ಅಕ್ರಮ ಶುಲ್ಕ ವಸೂಲಾತಿ ಖಂಡಿಸಿ ಆ.6ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಗಿತ್ತು. ಈ ವೇಳೆ PWD ಸಹಾಯಕ ಕಾರ್ಯಪಾಲಕ ಅಭಿಯಂತರರು ಶುಲ್ಕ ವಸೂಲಾತಿ ಗೇಟನ್ನು ತೆರವುಗೊಳಿಸಿದ್ದರು. ಆದರೆ ಇದೀಗ ಮತ್ತೆ ವಾಹನ ಶುಲ್ಕ ವಸೂಲಾತಿ ಆರಂಭಿಸಲಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ರಾಜ್ಯ ಹೆದ್ದಾರಿಯಲ್ಲಿ ಶುಲ್ಕ ವಸೂಲಿ ಮಾಡುತ್ತಿರುವ ಕ್ರಮ ಖಂಡನೀಯ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಮಲೆ ಮಹದೇಶ್ವರ ಬೆಟ್ಟದ ಮೂಲಕ ಹಾದುಹೋಗುವ ಪಾಲಾರ್–ಶ್ರೀರಂಗಪಟ್ಟಣ ಅಂತರರಾಜ್ಯ PWD ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ವಾಹನ ಶುಲ್ಕ ವಸೂಲಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ರಸ್ತೆ ಪ್ರಾಧಿಕಾರದ ವಶದಲ್ಲಿದೆಯೇ ಅಥವಾ PWD ಇಲಾಖೆಯ ವಶದಲ್ಲಿದೆಯೇ ಎಂಬುದನ್ನು ಸಾರ್ವಜನಿಕರಿಗೆ ತಿಳಿಯುವಂತೆ ಹೆದ್ದಾರಿಯಲ್ಲಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.ಅನ್ನದಾಸೋಹಕ್ಕಾಗಿ ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ನೀಡುವ ತರಕಾರಿಗಳು, ಹಣ್ಣುಹಂಪಲು ಮತ್ತು ದವಸ ಧಾನ್ಯಗಳ ವಿವರಗಳನ್ನು ಬಹಿರಂಗಪಡಿಸಬೇಕು. ಭಕ್ತರು ಹರಕೆ ರೂಪದಲ್ಲಿ ನೀಡುವ ದನಕರುಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಮಾಹಿತಿಯನ್ನೂ ಸಾರ್ವಜನಿಕರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.ಮಲೆ ಮಹದೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಕಾರಣಕರ್ತರಾದ ಆಲಂಬಾಡಿ ಜುಂಜೆಗೌಡರ ಗ್ರಾಮವಾದ ಆಲಂಬಾಡಿ ಸೇರಿದಂತೆ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ, ಅಪ್ಪುಕಾಂಪಟ್ಟಿ, ಜಂಬೂಪಟ್ಟಿ, ಮಾರಿಕೋಟೆ, ಪುದುಕಾಡು, ತೆಂಗಾಯಿಕೊಂಬು ಹಾಗೂ ಪುಂಗಂ ಆತ್ತೂರು ಗ್ರಾಮಗಳಿಗೆ ಇಂದಿಗೂ ಸಮರ್ಪಕ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಮೂಲಸೌಕರ್ಯಗಳಿಲ್ಲ. ಅರಣ್ಯ ಹಾಗೂ ಇತರೆ ತೊಡಕುಗಳನ್ನು ನಿವಾರಿಸಿ ಗ್ರಾಮಸ್ಥರಿಗೆ ಮೂಲಸೌಕರ್ಯ ಮತ್ತು ಹಕ್ಕುಪತ್ರಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.ಇದಲ್ಲದೆ, ಹೊಗೇನಕಲ್ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಗೆ ತಮಿಳುನಾಡಿನ ಮಾದರಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸುಸಜ್ಜಿತ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹನೂರು ತಾಲೂಕು ಘಟಕದ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.