ಮೈಸೂರು:  ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ "ಜ್ಞಾನ ಭಾರತ ಮಿಷನ್" ಅಂಗವಾಗಿ ಭಾರತದಾದ್ಯಂತ ಹಸ್ತಪ್ರತಿಗಳ/ ತಾಳೆಗರಿಗಳ  ಡಿಜಿಟಲೀಕರಣವನ್ನು ಕೈಗೊಳ್ಳಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಸಹ ಹಸ್ತಪ್ರತಿಗಳ ಮತ್ತು ತಾಳೆಗರಿಗಳ ಡಿಜಿಟಲೀಕರಣ ನಡೆಯುತ್ತಿರುತ್ತದೆ. ಜ್ಞಾನಭಾರತ್ ಮಿಷನ್‌ನ ಕಾರ್ಯ ಪ್ರಗತಿಯನ್ನು ಪರಿಶೀಲನೆ ಮಾಡಲು ಕೇಂದ್ರದ ಪತ್ರಾಗಾರ ಇಲಾಖೆಯ ಅಧಿಕಾರಿಗಳು ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಅವರು ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮೈಸೂರಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಹಸ್ತಪ್ರತಿಗಳ ಡಿಜಿಟಲೀಕರಣದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು ಹಾಗೂ ಅಲ್ಲಿ ಲಭ್ಯವಿರುವ ಮತ್ತು ಇತ್ತೀಚಿಗೆ ಯುನೆಸ್ಕೋ ಮೆಮೊರಿ ಆಫ಼್ ದ ವರ್ಲ್ಡ್ ಜ್ಞಾನ ಪರಂಪರೆ ಪಟ್ಟಿಗೆ ಸೇರಿರುವ  ಕೌಟಿಲ್ಯನ  "ಅರ್ಥಶಾಸ್ತ್ರ" ದ ಹಸ್ತಪ್ರತಿ ತಾಳೆಗರಿಯನ್ನು ಸಹ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿನ ತಾಳೆಗರಿಗಳ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಕರ್ನಾಟಕ ರಾಜ್ಯದಲ್ಲಿ ಹಸ್ತಪ್ರತಿಗಳು ತಾಳೆಗರಿಗಳ ಡಿಜಿಟಲೀಕರಣ ಉತ್ತಮ ರೀತಿಯಲ್ಲಿ ನಡೆಸಲು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಈ ಭೇಟಿಯಲ್ಲಿ ಕರ್ನಾಟಕ ರಾಜ್ಯದ ಜ್ಞಾನಭಾರತ್ ಮಿಷನ್‌ನ ರಾಜ್ಯ ನೋಡಲ್ ಅಧಿಕಾರಿ ಹಾಗೂ ರಾಜ್ಯ ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ  ಡಾ.ಪಿ.ಶಿವರಾಜು ಅವರು ಇದ್ದು ಅಗತ್ಯ ಮಾಹಿತಿಗಳನ್ನು ನೀಡಿದರು. ಜೊತೆಯಲ್ಲಿ ಓ ಆರ್ ಐ ನ ಅಧಿಕಾರಿಗಳು ಇದ್ದರು. ನಂತರ ಕೇಂದ್ರ ತಂಡವು ಜೆ.ಎಸ್.ಎಸ್. ವಿದ್ಯಾಪೀಠ ಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ತಾಳೆಗರಿಗಳ ಸಂರಕ್ಷಣೆ ಮತ್ತು ಹಸ್ತಪ್ರತಿಗಳ ಡಿಜಿಟಲೀಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು ಅಲ್ಲದೆ ಜೆ ಎಸ್ ಎಸ್ ಸಂಸ್ಥೆಯ ಉತ್ತಮ‌ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ಜೆ.ಎಸ್.ಎಸ್.ಸಂಸ್ಥೆಯ ಕಿರಿಯ    ಮಂಜುನಾಥ , ಬೆಟಸೂರಮಠ್   ಹಾಜರಿದ್ದರು. ಕೇಂದ್ರ ತಂಡದ ಅಧಿಕಾರಿಗಳಾದ   ಅನಿಲ್ ಕುಮಾರ್,   ಅಜಯ್ ಸಿಂಗ್,  ಸುನಿತಾದಾಸ್ ಭೇಟಿ ನೀಡಿದ್ದರು.