ಮೈಸೂರು :  ವಿಶ್ವಕ್ಕೆ ಮಹಾಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಅವರ ರಾಮಾಯಣದ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಭರತ ಮತ್ತು ಶತ್ರುಘ್ನನಂತಹ ಪಾತ್ರಗಳ ಆದರ್ಶ ಮೌಲ್ಯಗಳನ್ನು ಇಂದಿನ ಸನ್ನಿವೇಶದಲ್ಲಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪರಿಶಿಷ್ಟ ಪಂಗಡದ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.ಮೈಸೂರಿನ ಸರಗೂರು ತಾಲೂಕಿನ ಬಸಾಪುರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು ಉದ್ಘಾಟನಾ ಮಹೋತ್ಸವದಲ್ಲಿ ಮದಕರಿ ನಾಯಕರ ಪುತ್ಥಳಿ ಅನಾವರಣ ಮಾಡಿದ ನಂತರ ಸಚಿವರು ಭಾಷಣ ಮಾಡಿದರು. ಇಂಥ ಮಹತ್ವದ ಕಾರ್ಯಕ್ರಮ ಆಯೋಜಿಸಿ ಯಶಸ್ಸಿಗೆ ಶ್ರಮಿಸಿದ ಗ್ರಾಮಸ್ಥರೆಲ್ಲರೂ ಅಭಿನಂದನಾರ್ಹರು ಎಂದರು.ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಜನರಿಗೆ ನೇರವಾಗಿ ಶಿಕ್ಷಣ, ಸೌಲಭ್ಯ ಮತ್ತು ಸವಲತ್ತುಗಳು ದೊರೆಯುವಂತೆ ಕ್ರಮ ವಹಿಸಲಾಗುತ್ತಿದೆ. ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಮತ್ತು ಉಪದೇಶಗಳು ಕೇವಲ ಮೂರ್ತಿಗೆ ಸೀಮಿತವಾಗದೆ, ನಮ್ಮ ಬದುಕಿಗೆ ದಾರಿದೀಪವಾಗಬೇಕು ಎಂದು ಹೇಳಿದರು. ವಾಲ್ಮೀಕಿ ಅವರ ಜೊತೆಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಬಸವಣ್ಣ, ಬುದ್ಧ ಹಾಗೂ ಮೈಸೂರಿನ ಒಡೆಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮುದಾಯದ ಹಕ್ಕುಗಳನ್ನು ಪಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸರ್ಕಾರದ ವಿವಿಧ ಯೋಜನೆಗಳು ಸಮುದಾಯದ ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದರು.ಮೈಸೂರಿನಲ್ಲಿ ಸಮುದಾಯಕ್ಕೆ ಹಾಸ್ಟೆಲ್ ಮತ್ತು ತರಬೇತಿ ಕೇಂದ್ರದ ಬಹುದಿನಗಳ ಬೇಡಿಕೆ ಇದ್ದು, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡಿ ಬೆಟ್ಟದ ಕೆಳಗೆ 5 ಎಕರೆ ಜಮೀನು ನೀಡಲಾಗಿದೆ. ಬುಡಕಟ್ಟು ಕಲ್ಯಾಣ ಇಲಾಖೆಯಿಂದ 25 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಹಾಸ್ಟೆಲ್, ತರಬೇತಿ ಕೇಂದ್ರ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ವಾಲ್ಮೀಕಿ ಮಠದ ಎರಡನೇ ಪೀಠವನ್ನು ಸುರಪುರ ಹತ್ತಿರದ ಕೃಷ್ಣಾ ನದಿ ದಂಡೆಯ ಮೇಲೆ ಸ್ಥಾಪಿಸಲಾಗುತ್ತಿದ್ದು, ಬಡ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಶೈಕ್ಷಣಿಕ ಕೇಂದ್ರವನ್ನೂ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಗುರುಪೀಠ ಮಠಾಧೀಶರು ರಾಜನಹಳ್ಳಿ   ಶ್ರೀ ಪ್ರಸನ್ನಾನಂದಾಪುರಿ ಮಹಾ ಸ್ವಾಮೀಜಿ,  ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ  ಹಾಗೂ ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ. ಅನಿಲ್ ಕುಮಾರ್, ಮಹೋತ್ಸವದಲ್ಲಿ ಹೆಚ್.ಡಿ. ಕೋಟೆ ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಎಂ.ಸಿ. ದೊಡ್ಡನಾಯಕ, ಸರಗೂರು ತಾಲೂಕು ನಾಯಕರ ಸಂಘದ ಅಧ್ಯಕ್ಷ ಬಸವನಾಯಕ, ಮಾಜಿ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಮೈ.ಚಾ. ನಾಯಕ ಸಂಘದ ಅಧ್ಯಕ್ಷ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕ ವೀರನಾಯಕ, ಮುಖಂಡ ಎಸ್.ಸಿ. ಬಸವರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಬಸಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.