ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಕಮಿಷನ್ ಪಡೆಯುವುದಕ್ಕಾಗಿ : ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

ಬೆಂಗಳೂರು :ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಕಮಿಷನ್ ಪಡೆಯುವುದಕ್ಕಾಗಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಖಜಾನೆ ಲೂಟಿಯಾಗಿದೆ. ಗುತ್ತಿಗೆದಾರರನ್ನು ಬೀದಿಗೆ ತಂದು ನಿಲ್ಲಿಸಲಾಗುತ್ತಿದೆ. ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆಯುವ ಮೂಲಕ ಬೇರೆ ರಾಜ್ಯದವರಿಗೆ ಕಾಮಗಾರಿಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.ರಾಮನಗರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು, ನಾಲ್ಕು ಮೆಡಿಕಲ್ ಕಾಲೇಜುಗಳನ್ನು ಮಾಡಿದ್ದೇನೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ 2006ರಲ್ಲೇ ತೀರ್ಮಾನವಾಗಿತ್ತು. ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡಿದ್ದು ನಾನು. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೂ ಅನುಮತಿ ನೀಡಿದ್ದೆ. ಹೀಗಿರುವಾಗ ಅವರ ಕೊಡುಗೆ ಏನು? ಬರೀ ಭಾಷಣ ಮಾಡುವುದನ್ನು ಬಿಟ್ಟು ಕೆಲಸ ಮಾಡಲಿ ಎಂದು ಟೀಕಿಸಿದರು. ಸಿಎಂಗೆ ಬೆಂಬಲ ಕೊಡಿ ಅಂತ ಶಾಸಕ ಸಲಹೆ ಕೊಡುತ್ತಾರೆ. ಹೈದರಾಬಾದ್ನಿಂದ ಯಾರು ಯಾರನ್ನು ಕರೆದುಕೊಂಡು ಬಂದಿದ್ದೀರಿ, ಅವರ ಜೊತೆ ನಿಮ್ಮ ಸಂಬಂಧ ಏನು ಅಂತ ಗೊತ್ತಿದೆ. ರಾಜ್ಯದ ಅಭಿವೃದ್ಧಿಗೆ ಬೇಕಾದರೆ ಸಿಎಂಗೆ ಬೆಂಬಲ ಕೊಡುತ್ತೇನೆ. ನಿಮ್ಮ ಅಕ್ರಮಗಳಿಗೆ ನಾನು ಬೆಂಬಲ ಕೊಡಲ್ಲ. ಜಾತಿ ವ್ಯಾಮೋಹ ನಮಗೆ ಇಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾನೇ ಸನ್ಮಾನ ಮಾಡುತ್ತೇನೆ. ನಿಮ್ಮ ಕಸುಬು ಬಿಟ್ಟು ಜನರ ಪರ ಕೆಲಸ ಮಾಡಿದರೆ ನಾನೇ ಸನ್ಮಾನ ಮಾಡುತ್ತೇನೆ. ಒಕ್ಕಲಿಗ ಅಂತ ದುಡ್ಡು ಹೊಡೆದುಕೊಂಡು ಹೋದರೆ ನಾನು ಬೆಂಬಲ ಕೊಡಲ್ಲ. ಹೈದರಾಬಾದ್ಗೆ ವಿಮಾನ ಮಾಡಿ ಕರೆದುಕೊಂಡು ಹೋಗಿಲ್ಲವಾ? ನೀವು ನಮಗೆ ಸಲಹೆ ಕೊಡುತ್ತೀರಾ? ಸಿಎಂ ಅವರೇ ನಿಮ್ಮ ಅಕ್ರಮದ ಚಾಳಿ ಬಿಡಿ ಎಂದು ಕಿಡಿಕಾರಿದರು.ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿಯೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಶೇ.35ರಿಂದ 40ರಷ್ಟು ದರ ಏರಿಕೆ ಮಾಡಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈ ಯೋಜನೆ ಜಾರಿಗೊಳಿಸುವಾಗ ಅದಕ್ಕೆ ಬೇಕಾದ ಹಣವನ್ನು ಹೇಗೆ ಹೊಂದಿಸಬೇಕು ಎಂಬುದನ್ನು ಸರ್ಕಾರ ಮೊದಲೇ ನಿರ್ಧರಿಸಬೇಕಿತ್ತು. ಈಗ ಡೀಸೆಲ್ ಬೆಲೆ ಏರಿಕೆಯ ನೆಪ ಹೇಳಲಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿನ ಸೋರಿಕೆ ಮತ್ತು ಅಕ್ರಮಗಳನ್ನು ಮೊದಲು ನಿಲ್ಲಿಸಲಿ. ದರ ಏರಿಕೆಗೆ ನಿಜವಾದ ಕಾರಣವನ್ನು ಜನರ ಮುಂದೆ ಇಡಲಿ ಎಂದು ಆಗ್ರಹಿಸಿದರು. ಕೆಪಿಎಸ್ಸಿ ಅಕ್ರಮದ ಪಿತಾಮಹ ಕುಮಾರಸ್ವಾಮಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನಿಂದ ಯಾವ ಕೆಪಿಎಸ್ಸಿ ಅಕ್ರಮ ನಡೆದಿದೆ ಎಂಬುದನ್ನು ದಾಖಲೆ ಸಮೇತ ಹೇಳಲಿ ಎಂದು ಸವಾಲು ಹಾಕಿದರು. ಹೆಂಡದ ಅಂಗಡಿ ಮುಂದೆ ಕುಳಿತವರು ಸಂಜೆ ಮಾತನಾಡುವ ರೀತಿ ಗೃಹ ಸಚಿವ ಮಾತನಾಡುತ್ತಾರೆ. ನಾನು ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದ ಇಲಾಖೆಯಲ್ಲಿನ ನೇಮಕಾತಿ ಅಕ್ರಮಗಳ ದಾಖಲೆಗಳನ್ನು ನೀಡಿದ್ದೇನೆ. ಆದರೆ, ಅದಕ್ಕೆ ಉತ್ತರಿಸುವ ಯೋಗ್ಯತೆ ಅವರಿಗಿಲ್ಲ. ನಾನು 54 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೆ. ಆಗ ಯಾವ ಅಕ್ರಮ ನಡೆದಿತ್ತು ಎಂದು ಪ್ರಶ್ನಿಸಿದರು.ಕೆಪಿಎಸ್ಸಿಯಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಪಶು ವೈದ್ಯಕೀಯ ಪರೀಕ್ಷೆ ನಡೆದಿದ್ದು ನಿಮ್ಮ ಸರ್ಕಾರದ ಅವಧಿಯಲ್ಲೇ ಅಲ್ಲವೇ? ಆಗ ಅಕ್ರಮ ನಡೆದಿದ್ದು ಹೇಗೆ? ಜ್ಞಾನೇಂದ್ರ ನೇಮಕಾತಿ ಮಾಡಿದ್ದು ನಾನೇ? ಎಂದು ಪ್ರಶ್ನಿಸಿದರು. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಧ್ಯಪ್ರವೇಶಿಸದಿದ್ದರೆ ಕೆಪಿಎಸ್ಸಿ ಅಕ್ರಮ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು. ಸಿಐಡಿ ತನಿಖೆ ಪ್ರಕರಣವನ್ನು ಮುಚ್ಚಿಹಾಕಲು ನಡೆಯುತ್ತಿದೆ. ಜ್ಞಾನೇಂದ್ರ ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದ್ದು ನೀವೇ ಅಲ್ಲವೇ? ಅವರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿದ್ದು ಯಾರು? ಎಂದು ವಾಗ್ದಾಳಿ ನಡೆಸಿದರು. ಕ್ಲೌಡ್ ನೈನ್ ಆಸ್ಪತ್ರೆ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಆರೋಗ್ಯ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಮಗುವಿನ ಚಿಕಿತ್ಸೆಗೆ ಆಸ್ಪತ್ರೆ ಹೆಚ್ಚಿನ ಹಣ ಕೇಳುತ್ತಿದೆ. ಮಗುವಿಗೆ ಆಸ್ಪತ್ರೆಯೇ ಉಚಿತವಾಗಿ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಸರ್ಕಾರವೇ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾನೇ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ. ನನ್ನನ್ನು ಆಸ್ಪತ್ರೆಗೆ ಬರುವಂತೆ ಮಾಡಿಕೊಳ್ಳಬೇಡಿ. ಮಗುವಿನ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮುಖಂಡರ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಕುಣಿಗಲ್ ಕ್ಷೇತ್ರದ ಪ್ರಮುಖರು ನಾಗರಾಜಯ್ಯ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇವರೆಲ್ಲರೂ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಜೆಡಿಎಸ್ ಅಭಿಮಾನಿಗಳು. ಕೆಲವು ಕಾರಣಗಳಿಂದ ಕಾಂಗ್ರೆಸ್ಗೆ ಹೋಗಿದ್ದವರು, ಕಾಂಗ್ರೆಸ್ನ ವರ್ತನೆ ನೋಡಿ ಮರಳಿ ಮನೆಗೆ ಬಂದಿದ್ದಾರೆ. ಎಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.ಜೆಡಿಎಸ್ ಪಕ್ಷವನ್ನು ಮುಗಿಸುತ್ತೇವೆ ಎಂದು ಕೆಲವರು ಹೇಳಿದ್ದರು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ. ಅನೇಕರು ಜೆಡಿಎಸ್ ಸೇರಲು ಆಸಕ್ತಿ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ನಡೆಯಲಿವೆ. ಸಚಿವರೊಬ್ಬರು ಜೆಡಿಎಸ್ 100 ಸ್ಥಾನ ಗೆಲ್ಲುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಜೆಡಿಎಸ್ ಬಗ್ಗೆ ಮಾತನಾಡುವವರು ಮೊದಲು ಕಾಂಗ್ರೆಸ್ ಬಿಟ್ಟು ಏಕಾಂಗಿಯಾಗಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಸಂಬಂಧಿತ ಸುದ್ದಿಗಳು

ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದೆ : ಪ್ರಿಯಾಂಕ್ ಖರ್ಗೆ ಆರೋಪ
ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಐಟಿ-ಬಿಟ…
◷ 07/11/2026
ಸಿಎಂ ಆಗಿದ್ದಾಗ ರಿಯಲ್ ಎಸ್ಟೇಟ್ ನ ಬ್ಯುಸಿನೆಸ್ ಮಾಡಿರೋದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ : ಸಚಿವ ಹೆಚ್. ಡಿ.ಕೆ
ಬೆಂಗಳೂರು : ನಾನು ಸಿಎಂ ಆಗಿದ್ದಾಗ ರಿಯಲ್ ಎಸ್ಟೇಟ್ ನ ಬ್ಯುಸಿನೆಸ್ ಮಾಡಿದ್ರೆ, ಅದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊ…
◷ 07/11/2026
ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ತಪ್ಪಿದೆ : ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ
ಕೊಪ್ಪಳ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ತಪ್ಪಿದ್ದು, ಹಣಕಾಸು ನಿರ್ವಹಣೆ ಮಾಡಲು ಸಾ…
◷ 06/11/2026
ಹಳ್ಳಿಗುಗ್ಗು ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸಚಿವ ಹೆಚ್.ಡಿ ಕುಮಾರಸ್ವಾಮಿ ಹಳ್ಳಿ ಗುಗ್ಗು ಎಂಬ ಹೇಳಿಕೆಯನ್ನು ಮತ್ತೊಮ್ಮೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಥಿಸಿಕೊ…
◷ 05/11/2026
