ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ಅತಿ ದೊಡ್ಡ ಆಟಗಾರರ ಟ್ರೇಡ್ (ವರ್ಗಾವಣೆ) ಒಂದರಲ್ಲಿ, ಭಾರತದ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಸೇರ್ಪಡೆಯಾಗಿದ್ದರೆ, ಮುಂಬೈ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ (PBKS) ಅಂಗಳಕ್ಕೆ ಕಾಲಿಟ್ಟಿದ್ದಾರೆ.ಈ ಪ್ರಮುಖ ವರ್ಗಾವಣೆಯೊಂದಿಗೆ, ಪಂಜಾಬ್ ಕಿಂಗ್ಸ್ ತಂಡವು ತಮ್ಮ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ಅವರಿಗೆ ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಭಾವನಾತ್ಮಕ ಬೀಳ್ಕೊಡುಗೆ ನೀಡಿದೆ. " ಪಂಜಾಬ್ ಹೆಮ್ಮೆಪಡುವ ಹಂತದವರೆಗೆ ಬೆಳೆದಿದ್ದೀರಿ. ಇಲ್ಲಿ ನಿಮಗಾಗಿ ಎಂದಿಗೂ ಬಾಗಿಲು ತೆರೆದಿರುತ್ತದೆ, ಅರ್ಷ್ ಪಾ" ಎಂದು ಪಂಜಾಬ್ ಫ್ರಾಂಚೈಸಿ ಬರೆದುಕೊಂಡಿದೆ.ಖಾತೆ ಬದಲಿಸಿದವರು-ಹಾರ್ದಿಕ್ ಪಾಂಡ್ಯ: ತಮ್ಮ ಪ್ರಸ್ತುತ 16.35 ಕೋಟಿ ರೂ. ಮೊತ್ತದಿಂದ 18 ಕೋಟಿ ರೂ.ಗಳ ಶುಲ್ಕದೊಂದಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿದ್ದಾರೆ.ಅರ್ಷದೀಪ್ ಸಿಂಗ್: ತಮ್ಮ ಪ್ರಸ್ತುತ 18 ಕೋಟಿ ರೂ.ಗಳ ಮೊತ್ತದೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.ಮುಂಬೈ ಜೊತೆ ಹಾರ್ದಿಕ್ ಎರಡನೇ ಪಯಣ ಅಂತ್ಯ -2015 ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್ ಪ್ರವೇಶಿಸಿದ್ದ ಹಾರ್ದಿಕ್, 2015, 2017, 2019 ಮತ್ತು 2020 ರ ಶೀರ್ಷಿಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ 2022 ರಲ್ಲಿ ಗುಜರಾತ್ ಟೈಟನ್ಸ್ ಸೇರಿ ಮೊದಲ ಋತುವಿನಲ್ಲೇ ತಂಡಕ್ಕೆ ಕಪ್ ಗೆದ್ದುಕೊಟ್ಟು, 2023 ರಲ್ಲಿ ಫೈನಲ್ ತಲುಪಿಸಿದ್ದರು. 2024 ರಲ್ಲಿ ಮುಂಬೈಗೆ ಮರಳಿ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ಅವರಿಗೆ ಮುಂಬೈನಲ್ಲಿನ ಎರಡನೇ ಪಯಣ ಅಷ್ಟಾಗಿ ಸುಖಕರವಾಗಿರಲಿಲ್ಲ.ಹಾರ್ದಿಕ್ ಐಪಿಎಲ್‌ನಲ್ಲಿ ಒಟ್ಟು 162 ಪಂದ್ಯಗಳಿಂದ 146.28 ರ ಸ್ಟ್ರೈಕ್ ರೇಟ್‌ನಲ್ಲಿ 2,955 ರನ್ ಗಳಿಸಿದ್ದು, 82 ವಿಕೆಟ್ ಪಡೆದಿದ್ದಾರೆ. ಆದರೆ ಮುಂಬೈನಲ್ಲಿನ ಕೊನೆಯ 3 ಋತುಗಳಲ್ಲಿ 39 ಪಂದ್ಯಗಳಿಂದ 647 ರನ್ ಮತ್ತು 29 ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಗಿತ್ತು.ಪಂಜಾಬ್‌ನ ಯಶಸ್ವಿ ಬೌಲರ್ ಇನ್ಮುಂದೆ ಮುಂಬೈಗೆ ಬಲ-2019 ರಲ್ಲಿ ಪಂಜಾಬ್ ಕಿಂಗ್ಸ್ ಮೂಲಕವೇ ಐಪಿಎಲ್ ಪದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್, ಕಳೆದ 8 ಋತುಗಳಿಂದ ತಂಡದ ಪ್ರಮುಖ ಬೌಲರ್ ಆಗಿದ್ದರು. 96 ಪಂದ್ಯಗಳಿಂದ 111 ವಿಕೆಟ್ ಕಬಳಿಸಿರುವ ಅರ್ಷದೀಪ್, ಪಂಜಾಬ್ ಕಿಂಗ್ಸ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.ಅಂತಿಮ ಓವರ್‌ಗಳಲ್ಲಿ (ಡೆತ್ ಓವರ್‌ಗಳು) ರನ್ ನಿಯಂತ್ರಿಸುವ ಮತ್ತು ವಿಕೆಟ್ ಕಬಳಿಸುವ ಅರ್ಷದೀಪ್ ಅವರ ಸಾಮರ್ಥ್ಯವು ಮುಂಬೈ ಇಂಡಿಯನ್ಸ್‌ನ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದೆ.