ನವದೆಹಲಿ :  ಐಸಿಸಿ ಪುರುಷರ ಅಂಡರ್-19 ಏಷ್ಯಾ ಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯವು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಇಲ್ಲಿನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ (ಮಿನಿಸ್ಟ್ರಿ ಟರ್ಫ್ 2) ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.ಈ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡವು ಅಮೋಘ ಪ್ರದರ್ಶನ ನೀಡಿದೆ. 'ಬಿ' ಗುಂಪಿನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 113 ರನ್‌ಗಳಿಂದ, ಎರಡನೇ ಪಂದ್ಯದಲ್ಲಿ ಮಲೇಷ್ಯಾವನ್ನು 10 ವಿಕೆಟ್‌ಗಳಿಂದ ಹಾಗೂ ಮೂರನೇ ಪಂದ್ಯದಲ್ಲಿ ಶ್ರೀಲಂಕಾವನ್ನು 106 ರನ್‌ಗಳಿಂದ ಅಫ್ಘಾನ್ ಪಡೆ ಮಣಿಸಿತ್ತು. ಮತ್ತೊಂದೆಡೆ, 'ಎ' ಗುಂಪಿನಲ್ಲಿದ್ದ ಭಾರತ ತಂಡವು ಆಡಿದ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದ ಟೀಮ್ ಇಂಡಿಯಾ, ನಂತರ ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು ಮತ್ತು ಯುಎಇ ವಿರುದ್ಧ 70 ರನ್‌ಗಳ ಗೆಲುವು ದಾಖಲಿಸಿತ್ತು.ಅಫ್ಘಾನಿಸ್ತಾನ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಭಾರತದ ಪರ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಅರ್ಜುನ್ ರಜಪೂತ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಪಾಕಿಸ್ತಾನ ವಿರುದ್ಧ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅರ್ಜುನ್ ರಜಪೂತ್ ಕೇವಲ 85 ಎಸೆತಗಳಲ್ಲಿ 107 ರನ್ ಸಿಡಿಸಿ ಮಿಂಚಿದ್ದರು. ಇನ್ನು ಯುಎಇ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ 168 ಎಸೆತಗಳಲ್ಲಿ ಭರ್ಜರಿ 160 ರನ್ ಬಾರಿಸಿ ಫಾರ್ಮ್‌ನಲ್ಲಿದ್ದಾರೆ.