ನವದೆಹಲಿ : ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯೂಪಿಎಲ್) ಗುಜರಾತ್ ಜೈಂಟ್ಸ್ ತಂಡವು 16 ವರ್ಷದ ಸಮೈರಾ ರಾಘವ್ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಅವರ ಪಾಲಿಗೆ ಕನಸು ನನಸಾದಂತಾಗಿದೆ. ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನ ತಮ್ಮ ಹೆಸರು ಆ ಪಟ್ಟಿಯಲ್ಲಿಲ್ಲ ಎಂದೇ ಸಮೈರಾ ಭಾವಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು ಮಾತ್ರವಲ್ಲದೆ, ಗುಜರಾತ್ ತಂಡವು ಅವರನ್ನು 10 ಲಕ್ಷ ರೂಪಾಯಿಗಳಿಗೆ ತನ್ನ ತಂಡಕ್ಕೆ ಸೆಳೆದುಕೊಂಡಿದೆ.ಹುಡುಗರೊಂದಿಗೆ ಆಡಿ ಬೆಳೆದ ಸಮೈರಾ:ಸಮೈರಾರವರ ಮೊದಲ ಪ್ರೀತಿ ಅಥ್ಲೆಟಿಕ್ಸ್. ಆದರೆ, ಅವರ ತಂದೆ ಸುನೀಲ್ ರಾಘವ್ ಅವರನ್ನು ಕ್ರಿಕೆಟ್ ಅಕಾಡೆಮಿಗೆ ಕರೆದೊಯ್ದರು. ಅಲ್ಲಿಂದ ಅವರ ಕ್ರಿಕೆಟ್ ಪಯಣ ಆರಂಭವಾಯಿತು, ಆದರೆ ಆ ಹಾದಿ ಸುಲಭವಾಗಿರಲಿಲ್ಲ. ಅಕಾಡೆಮಿಯಲ್ಲಿ ಅವರಿಗಿಂತ ಹಿರಿಯ ವಯಸ್ಸಿನ ಓರ್ವ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಮಾತ್ರ ಇದ್ದರು. ಹೀಗಾಗಿ ಅವರು ಹೆಚ್ಚಿನ ಸಮಯ ಹುಡುಗರ ಜೊತೆಯೇ ಆಡಬೇಕಾಯಿತು. ಒಮ್ಮೆ ನೆಟ್‌ನಲ್ಲಿ ಅಭ್ಯಾಸ ಮಾಡುವಾಗ ಹುಡುಗನೊಬ್ಬ ಎಸೆದ ಚೆಂಡು ಸಮೈರಾರ ತೊಡೆಗೆ ಬಲವಾಗಿ ತಗುಲಿದಾಗ ಅವರು ನೋವಿನಿಂದ ನರಳಾಡಿದರು. ಆದರೆ, ಅವರ ತಂದೆ ಧೃತಿಗೆಡದಂತೆ ಪ್ರೋತ್ಸಾಹಿಸಿದರು.ಅಂದಿನಿಂದ ಸಮೈರಾ ಹಿಂತಿರುಗಿ ನೋಡಲೇ ಇಲ್ಲ. ಹುಡುಗರೊಂದಿಗೆ ಆಡಿ ತಮ್ಮ ಆಟವನ್ನು ಮತ್ತಷ್ಟು ನಯಗೊಳಿಸಿದ ಅವರು, ಕೇವಲ 14ನೇ ವಯಸ್ಸಿನಲ್ಲಿಯೇ ದೆಹಲಿ ಅಂಡರ್-19 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಪ್ರಸ್ತುತ ಟೂರ್ನಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿಯರಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.ಧೋನಿ ಮತ್ತು ವಿರಾಟ್ ಕೊಹ್ಲಿ ಪ್ರೇರಣೆ:ಪ್ರಸ್ತುತ ಬಿಲಾಸ್‌ಪುರ್‌ನಲ್ಲಿ ದೆಹಲಿ ಪರ ಟಿ-20 ಚಾಲೆಂಜರ್ ಟ್ರೋಫಿ ಆಡುತ್ತಿರುವ ಆಲ್-ರೌಂಡರ್ ಸಮೈರಾ, ತಮಗೆ ಹರ್ಮನ್‌ಪ್ರೀತ್ ಕೌರ್ ಮತ್ತು ಮಿಥಾಲಿ ರಾಜ್ ಅಂದರೆ ತುಂಬಾ ಇಷ್ಟ ಎಂದಿದ್ದಾರೆ. ತಮ್ಮ ಕೊಠಡಿಯಲ್ಲಿ ಈ ಆರಾಧ್ಯ ಆಟಗಾರ್ತಿಯರ ಫೋಟೋಗಳನ್ನು ಹಾಕಿಕೊಂಡಿದ್ದು, ಜೊತೆಗೆ ಭಾರತೀಯ ಜರ್ಸಿ ಧರಿಸಿರುವ ತಮ್ಮದೇ ಆದ ಫೋಟೋವನ್ನೂ ಅದರೊಂದಿಗೆ ಜೋಡಿಸಿಕೊಂಡಿದ್ದಾರೆ. ಇದು ಭಾರತ ತಂಡಕ್ಕಾಗಿ ಆಡುವ ತಮ್ಮ ಕನಸನ್ನು ನನಸು ಮಾಡಲು ಪ್ರತಿದಿನ ಸ್ಫೂರ್ತಿ ನೀಡುತ್ತದೆ ಎನ್ನುತ್ತಾರೆ ಸಮೈರಾ.ಸಂಕಷ್ಟದ ಸಮಯದಲ್ಲಿ ಪಂದ್ಯ ಗೆದ್ದುಕೊಡುವ ಇನಿಂಗ್ಸ್ ಆಡುವುದನ್ನು ತಾವು ಹೆಚ್ಚು ಇಷ್ಟಪಡುವುದಾಗಿ ಅವರು ಹೇಳುತ್ತಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಹೇಗೆ ಪಂದ್ಯವನ್ನು ಮುಕ್ತಾಯಗೊಳಿಸುತ್ತಿದ್ದರೋ, ತಾವೂ ಕೂಡ ಅದೇ ರೀತಿಯ ಶೈಲಿಯನ್ನು ಅನುಸರಿಸಲು ಯತ್ನಿಸುವುದಾಗಿ ತಿಳಿಸಿದ್ದಾರೆ. ಈ ಕಾರಣದಿಂದಲೇ ಅವರು ಧೋನಿ ಮತ್ತು ವಿರಾಟರ ದೊಡ್ಡ ಅಭಿಮಾನಿಯಾಗಿದ್ದಾರೆ.