ಒಡಿಶಾ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) 2026ರ ನವೆಂಬರ್ 5ರಂದು ಒಡಿಶಾ ಕರಾವಳಿಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ದ್ವೀಪದಿಂದ 'ಪ್ರಳಯ್' ಎಂಬ ಸ್ವದೇಶಿ ನಿರ್ಮಿತ ಕ್ವಾಸಿ-ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ.ಬೆಳಗ್ಗೆ ಸುಮಾರು 11.10ಕ್ಕೆ ನಡೆದ ಈ ಪರೀಕ್ಷೆಯಲ್ಲಿ ಕ್ಷಿಪಣಿಯು ತನ್ನ ಎಲ್ಲಾ ನಿಗದಿತ ಗುರಿಗಳನ್ನು ಯಶಸ್ವಿಯಾಗಿ ತಲುಪಿದೆ. ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ನಿಯೋಜಿಸಲಾಗಿದ್ದ ವಿವಿಧ ಉಪಕರಣಗಳು ಪರೀಕ್ಷೆಯ ಅಂಕಿ-ಅಂಶಗಳನ್ನು ದಾಖಲಿಸಿದ್ದು, ಈ ಮೂಲಕ ಕ್ಷಿಪಣಿಯ ನಿಖರತೆಯನ್ನು ದೃಢಪಡಿಸಲಾಗಿದೆ.ಸಂಪೂರ್ಣ ಸ್ವದೇಶಿ ತಂತ್ರಜ್ಞಾನ:ಹೈದರಾಬಾದ್‌ನ 'ರಿಸರ್ಚ್ ಸೆಂಟರ್ ಇಮಾರತ್' (RCI) ಸಂಸ್ಥೆಯು ಡಿಆರ್‌ಡಿಒನ ಇತರ ಪ್ರಯೋಗಾಲಯಗಳ ಸಹಯೋಗದೊಂದಿಗೆ ಈ ಕ್ಷಿಪಣಿಯನ್ನು ವಿನ್ಯಾಸಗೊಳಿಸಿದೆ. ಉತ್ಪಾದನಾ ಪಾಲುದಾರರಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಈ ಕ್ಷಿಪಣಿ ವ್ಯವಸ್ಥೆಯನ್ನು ನಿರ್ಮಿಸಿದೆ. ಬಳಕೆದಾರರ ಮೌಲ್ಯಮಾಪನ ಪರೀಕ್ಷೆಗಳ ಭಾಗವಾಗಿ (User Evaluation Trials) ನಡೆದ ಈ ಪ್ರಯೋಗದ ಸಮಯದಲ್ಲಿ ಡಿಆರ್‌ಡಿಒ ಹಿರಿಯ ಅಧಿಕಾರಿಗಳು, ರಕ್ಷಣಾ ಪಡೆಗಳ ಪ್ರತಿನಿಧಿಗಳು ಹಾಗೂ ಕೈಗಾರಿಕಾ ಪಾಲುದಾರರು ಉಪಸ್ಥಿತರಿದ್ದರು. ಈ ಯಶಸ್ವಿ ಪರೀಕ್ಷೆಯಿಂದಾಗಿ 'ಪ್ರಳಯ್' ಕ್ಷಿಪಣಿಯು ಶೀಘ್ರದಲ್ಲೇ ಭಾರತೀಯ ಸಶಸ್ತ್ರ ಪಡೆಗಳಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಹಾದಿ ಸುಗಮವಾಗಿದೆ.ಉನ್ನತ ಅಧಿಕಾರಿಗಳಿಂದ ಪ್ರಶಂಸೆ:ಕ್ಷಿಪಣಿಯ ಯಶಸ್ವಿ ಪರೀಕ್ಷೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ಸಶಸ್ತ್ರ ಪಡೆಗಳು ಮತ್ತು ಕೈಗಾರಿಕಾ ಪಾಲುದಾರರನ್ನು ಅಭಿನಂದಿಸಿದ್ದಾರೆ. "ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕ್ಷಿಪಣಿಯು ಉದ್ಭವಿಸುವ ಹೊಸ ಸವಾಲುಗಳನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳ ತಾಂತ್ರಿಕ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಇನ್ನಷ್ಟು ಬಲಪಡಿಸಲಿದೆ" ಎಂದು ಅವರು ತಿಳಿಸಿದ್ದಾರೆ.ಇದರೊಂದಿಗೆ ರಕ್ಷಣಾ ಕಾರ್ಯದರ್ಶಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಡಿಆರ್‌ಡಿಒ ಅಧ್ಯಕ್ಷರಾದ ರಾಜೇಶ್ ಕುಮಾರ್ ಸಿಂಗ್ ಅವರು ಸಹ ಈ ಯೋಜನೆಯಲ್ಲಿ ಶ್ರಮಿಸಿದ ಎಲ್ಲಾ ತಂಡಗಳಿಗೆ ಶುಭಾಶಯ ಕೋರಿದ್ದಾರೆ.