ನವದೆಹಲಿ : ಕೇಂದ್ರ ಸರ್ಕಾರವು ಕ್ಯಾನ್ಸರ್ ನಿರೋಧಕ 1,364 ಔಷಧಿ ಫಾರ್ಮುಲೇಶನ್‌ಗಳ ಪರಿಷ್ಕೃತ ಬೆಲೆಗಳನ್ನು ಜಾರಿಗೆ ತಂದಿದ್ದು, ಸುಮಾರು 137 ಕ್ಯಾನ್ಸರ್ ಔಷಧಿಗಳ ಟ್ರೇಡ್ ಮಾರ್ಜಿನ್ (ಲಾಭಾಂಶ) ಮೇಲೆ ಮಿತಿ ಹೇರಿದೆ. ಇದರಿಂದಾಗಿ ಗ್ರಾಹಕರಿಗೆ ವರ್ಷಕ್ಕೆ ಅಂದಾಜು 3,540.38 ಕೋಟಿ ರೂಪಾಯಿ ಉಳಿತಾಯವಾಗಲಿದೆ.ಔಷಧೀಯ ಇಲಾಖೆಯ ಅಡಿಯಲ್ಲಿ ಬರುವ 'ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ' (NPPA), 'ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ' ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸಿನಂತೆ ಈ ನಿರ್ಧಾರ ತೆಗೆದುಕೊಂಡಿದೆ.ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಮಾಹಿತಿ ಪ್ರಕಾರ, ನವೆಂಬರ್ 8 ರ ವೇಳೆಗೆ 85 ಔಷಧ ಕಂಪನಿಗಳು 121 ಔಷಧಿಗಳಿಗೆ ಸಂಬಂಧಿಸಿದ 1,364 ಕ್ಯಾನ್ಸರ್ ನಿರೋಧಕ ಫಾರ್ಮುಲೇಶನ್‌ಗಳ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆ (MRP) ವಿವರಗಳನ್ನು ಒದಗಿಸಿವೆ.ಶೇ. 50 ಕ್ಕಿಂತ ಹೆಚ್ಚು ಬೆಲೆ ಇಳಿಕೆ: ಒಟ್ಟು 679 ಬ್ರ್ಯಾಂಡ್‌ಗಳ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚು ಕಡಿಮೆಯಾಗಿದ್ದು, ಗರಿಷ್ಠ ಬೆಲೆ ಕಡಿತವು ಶೇಕಡಾ 96.45 ರಷ್ಟಿದೆ. ಈ ಪರಿಷ್ಕೃತ MRP ದರಗಳು ನವೆಂಬರ್ 9 ರಿಂದಲೇ ಜಾರಿಗೆ ಬಂದಿವೆ.ಗ್ರಾಹಕರು ಔಷಧಿ ಪ್ಯಾಕೇಟ್‌ಗಳ ಮೇಲೆ ಮುದ್ರಿಸಲಾದ ಹೊಸ ಬೆಲೆಗಳನ್ನು ಗಮನಿಸಬಹುದು. ಹಾಗೂ 'ಫಾರ್ಮಾ ಸಹಿ ದಾಮ್' (Pharma Sahi Daam) ಮೊಬೈಲ್ ಆಪ್ ಅಥವಾ NPPA ಅಧಿಕೃತ ವೆಬ್‌ಸೈಟ್ ಮೂಲಕ ಬೆಲೆಗಳನ್ನು ಪರಿಶೀಲಿಸಬಹುದು.ಯಾವುದೇ ಕೆಮಿಸ್ಟ್ ಅಥವಾ ಆಸ್ಪತ್ರೆ ಫಾರ್ಮಸಿಗಳು ಪರಿಷ್ಕೃತ ಎಂಆರ್‌ಪಿಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲು ಮಾಡುವಂತಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.