ನವದೆಹಲಿ : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)-ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆಯ ವರ್ಷಪೂರ್ತಿ ನಡೆಯುವ ಸುವರ್ಣ ಮಹೋತ್ಸವ ಸಮಾರಂಭವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಶೋಧನೆ, ಸಹಯೋಗ ಮತ್ತು ನಾವೀನ್ಯತೆಯ ಮೂಲಕ 2047ರ ವೇಳೆಗೆ 'ವಿಕಸಿತ ಭಾರತ'ದ ಆರೋಗ್ಯ ಸಂಬಂಧಿತ ಗುರಿಗಳನ್ನು ಸಾಧಿಸುವಲ್ಲಿ ಐಸಿಎಂಆರ್‌ನಂತಹ ಪ್ರಮುಖ ಸಂಸ್ಥೆಗಳು ಮುಂಚೂಣಿ ಪಾತ್ರ ವಹಿಸಬಲ್ಲವು ಎಂದು ಅಭಿಪ್ರಾಯಪಟ್ಟರು. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಮಲೇರಿಯಾ ದೀರ್ಘಕಾಲದಿಂದಲೂ ಸಾರ್ವಜನಿಕ ಆರೋಗ್ಯದ ಗಂಭೀರ ಸವಾಲಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ಇದು ದೇಶದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಆರೋಗ್ಯ ಸೇವೆ, ಆಧುನಿಕ ತಪಾಸಣಾ ತಂತ್ರಜ್ಞಾನ, ಪರಿಣಾಮಕಾರಿ ಔಷಧಿಗಳು, ಸೊಳ್ಳೆ ನಿಯಂತ್ರಣ ಅಭಿಯಾನ ಮತ್ತು ಸಮುದಾಯದ ಸಹಭಾಗಿತ್ವದಿಂದಾಗಿ ಮಲೇರಿಯಾ ಹರಡುವಿಕೆಯನ್ನು ತಡೆಯುವಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. 2024ರಲ್ಲಿ ಭಾರತವು ವಿಶ್ವ ಆರೋಗ್ಯ ಸಂಸ್ಥೆಯ (WHO) ‘ಹೈ ಬರ್ಡನ್ ಟು ಹೈ ಇಂಪ್ಯಾಕ್ಟ್’ ಪಟ್ಟಿಯಿಂದ ಹೊರಬಂದಿರುವುದು ಜಾಗತಿಕ ಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ ಎಂದು ಅವರು ಶ್ಲಾಘಿಸಿದರು. ಕಳೆದ ಐದು ದಶಕಗಳಲ್ಲಿ ಮಲೇರಿಯಾ ಪರಾವಲಂಬಿಗಳು, ಸೊಳ್ಳೆ ನಿಯಂತ್ರಣ, ಕೀಟನಾಶಕ ಪ್ರತಿರೋಧ ಮತ್ತು ಸಮುದಾಯ ಆಧಾರಿತ ಕಣ್ಗಾವಲು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆಯು ಅಗ್ರಗಣ್ಯ ಸಂಶೋಧನೆ ನಡೆಸಿದೆ ಎಂದು ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.ಆದರೆ, ಹವಾಮಾನ ವೈಪರೀತ್ಯ, ಅವೈಜ್ಞಾನಿಕ ನಗರೀಕರಣ ಮತ್ತು ಸೊಳ್ಳೆಗಳಲ್ಲಿ ಹೆಚ್ಚುತ್ತಿರುವ ಕೀಟನಾಶಕ ಪ್ರತಿರೋಧವು ಮಲೇರಿಯಾ ನಿರ್ಮೂಲನೆಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದ ಅವರು, ಕೇವಲ ಆರೋಗ್ಯ ಕಾರ್ಯಕರ್ತರ ಪ್ರಯತ್ನದಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ; ನೀರು ನಿಲ್ಲದಂತೆ ತಡೆಯುವುದು ಮತ್ತು ಪರಿಸರ ನಿರ್ವಹಣೆಯತ್ತಲೂ ಗಮನ ಹರಿಸಬೇಕು ಎಂದರು.ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯೂ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಬದಲಾಗುತ್ತಿರುವ ಮುಂಗಾರಿನಿಂದಾಗಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಕ್ಷಯ, ಕುಷ್ಠ   ರೋಗಗಳ ನಿಯಂತ್ರಣಕ್ಕೂ ಐಸಿಎಂಆರ್ ಸಂಶೋಧನೆಗಳು ದಿಕ್ಸೂಚಿಯಾಗಿವೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ದಾಖಲೆಯ ಸಮಯದಲ್ಲಿ ದೇಶವ್ಯಾಪಿ ತಪಾಸಣಾ ಜಾಲ ಸ್ಥಾಪಿಸಿದ್ದಲ್ಲದೆ, ದೇಶದ ಮೊದಲ ಸ್ವದೇಶಿ ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲೂ ಐಸಿಎಂಆರ್ ಪ್ರಮುಖ ಪಾತ್ರ ವಹಿಸಿತ್ತು ಎಂದು ಅವರು ಸ್ಮರಿಸಿದರು.ಸುವರ್ಣ ಮಹೋತ್ಸವವು ಕೇವಲ ಹಳೆಯ ಸಾಧನೆಗಳನ್ನು ನೆನೆಯುವ ಸಮಯವಲ್ಲ, ಭವಿಷ್ಯಕ್ಕೆ ದೃಢವಾದ ಗುರಿಗಳನ್ನು ನಿಗದಿಪಡಿಸುವ ಸಂದರ್ಭವಾಗಿದೆ. 2047ರ ವೇಳೆಗೆ ಸದೃಢ ಮತ್ತು ಆರೋಗ್ಯವಂತ ಭಾರತವನ್ನು ನಿರ್ಮಿಸಲು ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಶಿಕ್ಷಣ ಕೇಂದ್ರಗಳು ಮತ್ತು ಕೈಗಾರಿಕಾ ವಲಯದ ನಡುವೆ ಬಲವಾದ ಸಹಯೋಗ ಅಗತ್ಯವಿದೆ ಎಂದು ರಾಷ್ಟ್ರಪತಿ ಮುರ್ಮು ಪ್ರತಿಪಾದಿಸಿದರು.