ಹಾಸನ: ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರು ಹಾಗೂ ಜನಸಾಮಾನ್ಯರು ಸಮೃದ್ಧಿಯಿಂದ ಬದುಕುವಂತಾಗಲಿ. ಮುಂದಿನ ವರ್ಷವೂ ಮಂಡ್ಯ ಜಿಲ್ಲೆಯ ಜನತೆ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವಂತಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಕಾವೇರಿ ನದಿ ತುಂಬಿ ಹರಿಯಲಿ, ತಮಿಳುನಾಡಿನೊಂದಿಗೆ ಯಾವುದೇ ವಿವಾದ ಉಂಟಾಗದಿರಲಿ ಹಾಗೂ ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿ ಆತಂಕ ಎದುರಾಗದಂತೆ ಆಶೀರ್ವದಿಸಲಿ ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ಮಂಡ್ಯ ಶಾಸಕ ಗಣಿಗೆರೆ ರವಿ ತಿಳಿಸಿದರು.ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು. ಶೇ.80ರಷ್ಟು ಜನರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರ ಜನರಿಂದ ಸಂಗ್ರಹಿಸಿದ ಹಣವನ್ನು ಜನರಿಗಾಗಿಯೇ ವಿನಿಯೋಗಿಸುತ್ತಿದೆ. ಅದನ್ನು ಕಟ್ಟಡ ನಿರ್ಮಾಣಕ್ಕೆ ಬಳಸದೆ ಜನರ ಕಲ್ಯಾಣಕ್ಕೆ ನೀಡಲಾಗುತ್ತಿದೆ. ಬೆಲೆ ಏರಿಕೆ ವಿಚಾರದಲ್ಲಿ ವಿಧಾನಸಭೆಯಲ್ಲಿ ಸರ್ಕಾರವನ್ನು ಟೀಕಿಸುವ ವಿರೋಧ ಪಕ್ಷದವರು, ರೈತರಿಗೆ ಅನುಕೂಲವಾಗುವಂತೆ ಬೆಲೆ ಹೆಚ್ಚಳದ ಪ್ರಸ್ತಾಪ ಬಂದಾಗ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು. ಮಂಡ್ಯ ಜಿಲ್ಲೆಯಲ್ಲಿ ಸುಮಾರು 1,700ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕೈಗಾರಿಕೆಗಳ ಸ್ಥಾಪನೆಯ ಮೂಲಕ ಸುಮಾರು 20 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವಿದೆ. ಆದರೆ, ಕೈಗಾರಿಕೆಗಳಿಗೆ ಜಾಗ ನೀಡುವ ವಿಚಾರದಲ್ಲಿ ಜೆಡಿಎಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನನ್ನ ಕ್ಷೇತ್ರದಲ್ಲಿ ನೂರು ಎಕರೆ ಜಾಗ ನೀಡಲು ನಾನೇ ಮುಂದೆ ಬಂದಿದ್ದೇನೆ. ಕೈಗಾರಿಕೆ ಸ್ಥಾಪನೆಯಿಂದ ಸಾವಿರಾರು ಯುವಕರಿಗೆ ಉದ್ಯೋಗ ಸಿಗುತ್ತದೆ. ಆದರೆ, ಕೆಲವೇ ರೈತರನ್ನು ಮುಂದಿಟ್ಟುಕೊಂಡು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ರೈತರ ಮನವೊಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇನ್ನೂರು ಜನರ ಸಮಸ್ಯೆಯನ್ನು ಪರಿಹರಿಸಿ 20ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಆದರೆ, ಕೈಗಾರಿಕೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಅಭಿವೃದ್ಧಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ದೂರಿದರು.

ಬೆಳ್ಳೂರಿನಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರದಲ್ಲಿಯೂ ಇದೇ ರೀತಿಯ ಗೊಂದಲ ಸೃಷ್ಟಿಸಲಾಯಿತು. ಇದೀಗ ಮಂಡ್ಯದಲ್ಲಿಯೂ ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುವ ಪ್ರಯತ್ನ ನಡೆಯುತ್ತಿದೆ. ಒಂದು ಕಡೆ ಕೈಗಾರಿಕೆಗಳಿಗೆ ಜಾಗ ನೀಡುವಂತೆ ಒತ್ತಾಯಿಸುವವರು, ಮತ್ತೊಂದೆಡೆ ಜಾಗ ನೀಡಲು ಮುಂದಾದಾಗ ವಿರೋಧ ವ್ಯಕ್ತಪಡಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗದ ಕೊರತೆಯಿದ್ದರೆ ಬೇರೆ ಪ್ರದೇಶಗಳಲ್ಲಿಯೂ ಅವಕಾಶ ಕಲ್ಪಿಸಬಹುದು. ನಮ್ಮ ಭಾಗದಲ್ಲಿ ಜಾಗ ಲಭ್ಯವಿಲ್ಲದಿದ್ದರೂ ನಮ್ಮ ಯುವಕರಿಗೆ ಉದ್ಯೋಗ ಸಿಗುವಂತಾಗಬೇಕು. ಅಗತ್ಯವಿದ್ದರೆ ನೂರು ಕಿಲೋಮೀಟರ್ ದೂರದವರೆಗೂ ಯುವಕರಿಗೆ ಬಸ್ ಮೂಲಕ ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆ ಕಲ್ಪಿಸಲು ಸಿದ್ಧರಿದ್ದೇವೆ. ಆದರೆ, ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು. ಹಾಸನಾದಲ್ಲೆ ಕೈಗಾರಿಕೆ ತಂದು ೨೦ ಸಾವಿರ ಜನರಿಗೆ ಉದ್ಯೋಗ ಕೊಡಿ ಯಾರು ಬೇಡ ಎಂದವರು. ಜೆಡಿಎಸ್ ನಾಯಕರ ಜಾಗದ ವಿಚಾರದಲ್ಲಿನ ನಿಲುವು ಹಾಗೂ ಅದರ ಹಿಂದಿರುವ ಉದ್ದೇಶವನ್ನು ದಾಖಲೆಗಳ ಸಮೇತ ರಾಜ್ಯದ ಜನರ ಮುಂದೆ ಬಹಿರಂಗಪಡಿಸುತ್ತೇನೆ. ಸಂಬಂಧಪಟ್ಟ ಜಮೀನುಗಳ ಆರ್‌ಟಿಸಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ರಾಜಕಾರಣ ಸರಿಯಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಅವಕಾಶ ನೀಡಲಾಗಿದೆ. ಹಾಗೆಯೇ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಚರ್ಚೆಗಳೂ ನಡೆಯುತ್ತಿವೆ. ಆಗಿದ್ದಾರೆ. ಆದರೆ, ಮಂಡ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು. ಟೀಕೆ, ಆರೋಪ ಮತ್ತು ಪ್ರತ್ಯಾರೋಪಗಳಿಗೆ ಸೀಮಿತವಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವತ್ತ ರಾಜಕೀಯ ನಾಯಕರು ಗಮನಹರಿಸಬೇಕು ಎಂದು ಹೇಳಿದರು.