ನವದೆಹಲಿ:  ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ್ದ ಉದ್ವಿಗ್ನತೆ ಶಮನಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇದರ ಪರಿಣಾಮವಾಗಿ ಜಾಗತಿಕ ಬೆಂಚ್‌ಮಾರ್ಕ್ 'ಬ್ರೆಂಟ್ ಕ್ರೂಡ್' (Brent Crude) ಬೆಲೆಯು ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕೆಳಕ್ಕೆ ಕುಸಿದಿದೆ.   ಭಾರತೀಯ ಸಮಯ ಮಧ್ಯಾಹ್ನ 3:50ರ ವೇಳೆಗೆ, ಬ್ರೆಂಟ್ ಕ್ರೂಡ್ ದರವು ಶೇಕಡಾ 2.80 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 89.88 ಡಾಲರ್‌ಗೆ ತಲುಪಿತ್ತು. ಅದೇ ರೀತಿ, ಯುಎಸ್ ಡಬ್ಲ್ಯೂಟಿಐ (US WTI) ಕಚ್ಚಾ ತೈಲದ ದರವು ಶೇಕಡಾ 2.31 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 84.85 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿದೆ.ಟ್ರಂಪ್ ಹೇಳಿಕೆ -ಇರಾನ್ ವಿರುದ್ಧ ವಾಷಿಂಗ್ಟನ್ ಸದ್ಯಕ್ಕೆ ಯಾವುದೇ ಹೊಸ ಮಿಲಿಟರಿ ದಾಳಿ ನಡೆಸುವುದಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಳಿವು ಕಚ್ಚಾ ತೈಲ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಮಧ್ಯಪ್ರಾಚ್ಯದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ದೀರ್ಘಕಾಲದ ಅಡಚಣೆ ಉಂಟಾಗಬಹುದು ಎಂಬ ಮಾರುಕಟ್ಟೆಯ ಆತಂಕ ದೂರವಾಗಿದೆ.ಮಧ್ಯಪ್ರಾಚ್ಯದಲ್ಲಿ ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯುತ್ತಿರುವುದರಿಂದ ತೈಲ ಬೆಲೆಯ ಮೇಲೆ ಒತ್ತಡ ಉಂಟಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಆದಾಗ್ಯೂ, ಪ್ರಸ್ತುತ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮತ್ತು ಹಡಗು ಸಾಗಣೆ ಮಾರ್ಗಗಳ ಭದ್ರತೆಯ ಕುರಿತಾದ ಅನಿಶ್ಚಿತತೆಯಿಂದಾಗಿ ಬೆಲೆ ಇಳಿಕೆಯ ಪ್ರಮಾಣ ಸೀಮಿತವಾಗಿರಬಹುದು ಎನ್ನಲಾಗಿದೆ