ನವದೆಹಲಿ : ಭಾರತದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉದ್ಯಮದ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (CIE) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆ'ಗೆ (Scheme for Enhancement of Construction and Infrastructure Equipment Manufacturing Ecosystem) ಅನುಮೋದನೆ ನೀಡಿದೆ. ಬರೋಬ್ಬರಿ ₹11,000 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯು ದೇಶೀಯ ಉತ್ಪಾದನೆಗೆ ಭಾರಿ ಉತ್ತೇಜನ ನೀಡಲಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹಂಚಿಕೊಂಡಿದ್ದಾರೆ. ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು, ಸ್ಥಳೀಕರಣಕ್ಕೆ (Localization) ವೇಗ ನೀಡುವುದು ಮತ್ತು ವಿದೇಶಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ನೀಡಲಾಗುವ ಮಾರಾಟ ಆಧಾರಿತ ಪ್ರೋತ್ಸಾಹಧನವು ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ, ನಾವೀನ್ಯತೆ ಮತ್ತು ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಪ್ರೇರಣೆ ನೀಡಲಿದೆ. ರಸ್ತೆ, ಗಣಿಗಾರಿಕೆ, ಮೆಟ್ರೋ, ರೈಲ್ವೆ, ನಗರಾಭಿವೃದ್ಧಿ ಮತ್ತು ಬಂದರುಗಳಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯವಿರುವ ವಿಶ್ವದರ್ಜೆಯ ನಿರ್ಮಾಣ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ಇದು ಸಹಕಾರಿಯಾಗಲಿದೆ. ಸುಧಾರಿತ ತಂತ್ರಜ್ಞಾನದ ಅಳವಡಿಕೆ, ವಿಶ್ವದರ್ಜೆಯ ಪರೀಕ್ಷಾ ಸೌಲಭ್ಯಗಳ ಸ್ಥಾಪನೆ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಜಾರಿಯಾಗುತ್ತಿರುವ ಈ ಯೋಜನೆಯು, 'ಆತ್ಮನಿರ್ಭರ ಭಾರತ' ಮತ್ತು 'ವಿಕಸಿತ ಭಾರತ 2047'ರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.