ಮಂಗಳೂರು :  ಕಡಲನಗರಿ ಮಂಗಳೂರಿನಲ್ಲಿ ದೇಶದ ಮೊದಲ ‘ಸಸ್ಟೈನಬಲ್ ಡೇಟಾ ಸೆಂಟರ್’ (Sustainable Data Center) ಸ್ಥಾಪಿಸಲು ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಬುಧವಾರ ಮಂಗಳೂರಿನ ತಣ್ಣೀರುಬಾವಿ ಪ್ರದೇಶಕ್ಕೆ ಭೇಟಿ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಉದ್ದೇಶಿತ ಯೋಜನೆಯ ಜಾಗವನ್ನು ಖುದ್ದು ಪರಿಶೀಲಿಸಿದರು.ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ‘ಸಸ್ಟೈನಬಲ್ ಡೇಟಾ ಸೆಂಟರ್ ನೀತಿ’ಯನ್ನು ಜಾರಿಗೆ ತಂದಿದ್ದೇವೆ. ಮಂಗಳೂರಿನ ತಣ್ಣೀರುಬಾವಿಯಲ್ಲಿ ಸುಮಾರು 49 ಎಕರೆ ಜಾಗವಿದ್ದು, ಸಿಆರ್‌ಝಡ್ (CRZ) ನಿಯಮಗಳ ಅಡಿಯಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ" ಎಂದು ತಿಳಿಸಿದರು.ಈ ಜಾಗದ ಸಾಧಕ-ಬಾಧಕಗಳ ಕುರಿತು ವಿವಿಧ ತಾಂತ್ರಿಕ ಹಾಗೂ ಪರಿಸರ ಏಜೆನ್ಸಿಗಳಿಂದ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಈ ಯೋಜನೆಗೆ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರದಿಂದ ಶೀಘ್ರದಲ್ಲೇ ಶ್ವೇತಪತ್ರ (White Paper) ಹೊರಡಿಸಲಾಗುವುದು ಎಂದು ಸಚಿವರು ಘೋಷಿಸಿದರು. ಮಂಗಳೂರು ಮಾತ್ರವಲ್ಲದೆ ಉಡುಪಿಯಲ್ಲೂ ಡೇಟಾ ಸೆಂಟರ್ ಸ್ಥಾಪನೆಗಾಗಿ ಜಾಗವನ್ನು ಗುರುತಿಸಲಾಗಿದೆ. ಆದರೆ, ಆ ಪ್ರದೇಶ ಅರಣ್ಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.ಕರಾವಳಿ ಭಾಗದಲ್ಲಿ ಈಗಾಗಲೇ ₹5,000 ಕೋಟಿ ಮೌಲ್ಯದ ಐಟಿ ರಫ್ತು ನಡೆಯುತ್ತಿದೆ. ಮಂಗಳೂರು, ಮಣಿಪಾಲ ಮತ್ತು ಉಡುಪಿಯ ಭವಿಷ್ಯದ ತಂತ್ರಜ್ಞಾನ ಹಾಗೂ ಕೈಗಾರಿಕಾ ಅಭಿವೃದ್ಧಿಗಾಗಿ ‘ಬಿಯಾಂಡ್ ಬೆಂಗಳೂರು’ (Beyond Bengaluru) ಉಪಕ್ರಮದ ಅಡಿಯಲ್ಲಿ ಸಮಗ್ರ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.