ನವದೆಹಲಿ : 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಕೈಜೋಡಿಸಿವೆ. ಮಂಗಳವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು. ಇದರೊಂದಿಗೆ ಸುಮಾರು ಆರು ವರ್ಷಗಳ ಬಳಿಕ ಅಕಾಲಿದಳ ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಮರಳಿದಂತಾಗಿದೆ.

ಬಿಜೆಪಿ ಕಚೇರಿಗೆ ಸುಖ್‌ಬೀರ್ ಸಿಂಗ್ ಬಾದಲ್ ಭೇಟಿ

ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಮಂಗಳವಾರ ಮಧ್ಯಾಹ್ನ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿ, ಅಮಿತ್ ಶಾ ಮತ್ತು ನಿತಿನ್ ನಬೀನ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್, ಹಿರಿಯ ನಾಯಕರಾದ ಸುನಿಲ್ ಜಾಖಡ್ ಮತ್ತು ಅಶ್ವನಿ ಶರ್ಮಾ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಮೈತ್ರಿ ಘೋಷಿಸಿದ ಅಮಿತ್ ಶಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರ ಕೊಠಡಿಯಲ್ಲಿ ಉಭಯ ಪಕ್ಷಗಳ ನಾಯಕರ ಸಭೆ ನಡೆದಿದ್ದು, ಮೈತ್ರಿಯ ಕುರಿತು ಚರ್ಚಿಸಲಾಗಿದೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಅಕಾಲಿದಳ ಒಟ್ಟಾಗಿ ಎದುರಿಸಲು ನಿರ್ಧರಿಸಿವೆ. ಇಂದಿನಿಂದ ಅಕಾಲಿದಳ ಎನ್‌ಡಿಎ ಮಿತ್ರಪಕ್ಷವಾಗಿ ಕಾರ್ಯನಿರ್ವಹಿಸಲಿದೆ" ಎಂದು ತಿಳಿಸಿದರು.

ಅತ್ಯಂತ ಹಳೆಯ ಮಿತ್ರನ ಮರಳುವಿಕೆಗೆ ಸಂತಸ

"ದೇಶಾದ್ಯಂತ ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ನಮ್ಮ ಅತ್ಯಂತ ಹಳೆಯ ಮಿತ್ರ ಅಕಾಲಿದಳ ಮತ್ತೆ ಜೊತೆಯಾಗಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ" ಎಂದ ಅಮಿತ್ ಶಾ, ಸುಖ್‌ಬೀರ್ ಸಿಂಗ್ ಬಾದಲ್ ಹಾಗೂ ಅಕಾಲಿದಳದ ಎಲ್ಲಾ ನಾಯಕರನ್ನು ಎನ್‌ಡಿಎಗೆ ಸ್ವಾಗತಿಸಿದರು.

ಸುಖ್‌ಬೀರ್ ಬಾದಲ್‌ಗೆ ಕರೆ ಮಾಡಿ ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

"ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎನ್‌ಡಿಎ ವಿಸ್ತರಣೆಯ ಕುರಿತು ಮಾತನಾಡಿದಾಗ, ಅವರು ಅತ್ಯಂತ ಸಂತೋಷದಿಂದ ಸುಖ್‌ಬೀರ್ ಸಿಂಗ್ ಬಾದಲ್ ಅವರಿಗೆ ಕರೆ ಮಾಡಿದರು. ಅಕಾಲಿದಳ ಜೊತೆಯಾದಾಗಲೇ ಎನ್‌ಡಿಎ ಪೂರ್ಣಗೊಳ್ಳುತ್ತದೆ ಎಂಬ ಭಾವನೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮತ್ತು ಬಾದಲ್ , ಅಟಲ್-ಅಡ್ವಾಣಿ ಮತ್ತು ಬಾದಲ್ ಅವರ ನಡುವೆ ಹಲವು ವರ್ಷಗಳ ಆಳವಾದ ಸಂಬಂಧವಿದೆ. ಬಿಜೆಪಿ ಮತ್ತು ಅಕಾಲಿದಳದ ನಡುವೆಯೂ ಅತ್ಯಂತ ಗಾಢವಾದ ಬಾಂಧವ್ಯವಿದೆ" ಎಂದು ಅಮಿತ್ ಶಾ ಹೇಳಿದರು.