ನವದೆಹಲಿ:   ದೀಪಾವಳಿ ಹಬ್ಬವನ್ನು 'ಖುಷಿಯ ಈದ್ (ಖುಷಿಗಳ ಹಬ್ಬ) ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಣ್ಣಿಸಿರುವುದಕ್ಕೆ ಬಿಜೆಪಿ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.ದೀಪಾವಳಿ ಶುಭಾಶಯ ಕೋರುವಾಗ ಮಲ್ಲಿಕಾರ್ಜುನ ಖರ್ಗೆ ಅವರು, "ದೀಪಾವಳಿ ದೇಶದ ದೊಡ್ಡ ಹಬ್ಬವಾಗಿದ್ದು, ಎಲ್ಲರೂ ಆಚರಿಸುತ್ತಾರೆ. ಇದು ಖುಷಿ ತರುವ ಈದ್ ಇದ್ದಂತೆ" ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, "ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ಓಲೈಕೆ ರಾಜಕಾರಣ ಮಾಡುವುದೇ ಅಭ್ಯಾಸವಾಗಿದೆ. ಖರ್ಗೆ ಅವರೇ, ಈದ್‌ಗೆ ತನ್ನದೇ ಆದ ಮಹತ್ವವಿದೆ, ದೀಪಾವಳಿಗೆ ತನ್ನದೇ ಆದ ಪವಿತ್ರತೆ ಹಾಗೂ ಗುರುತಿದೆ. ದೀಪಾವಳಿಯನ್ನು ದೀಪಾವಳಿ ಎನ್ನಲು ನಿಮಗೇನು ಸಮಸ್ಯೆ? ಧೈರ್ಯವಿದ್ದರೆ ಮುಂದಿನ ದಿನಗಳಲ್ಲಿ ಈದ್ ಹಬ್ಬವನ್ನು 'ಖುಷಿಯ ದೀಪಾವಳಿ' ಎಂದು ಕರೆಯುತ್ತೀರಾ?" ಎಂದು ಸವಾಲು ಹಾಕಿದ್ದಾರೆ.ಬಿಜೆಪಿಯ ಸವಾಲಿಗೆ ಸಮರ್ಥನೆ ನೀಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, "ಅರಬಿ ಭಾಷೆಯಲ್ಲಿ 'ಈದ್' ಎಂದರೆ 'ಹಬ್ಬ' ಎಂಬ ಸರಳ ಅರ್ಥವಿದೆ. ಭಾಷಾ ಜ್ಞಾನವಿಲ್ಲದವರು ಮತ್ತು ಸಂಘಿ ಮನಸ್ಥಿತಿಯವರು ಮಾತ್ರ ಹಬ್ಬದ ಶುಭಾಶಯದಲ್ಲೂ ನಕಾರಾತ್ಮಕತೆಯನ್ನು ಹುಡುಕುತ್ತಾರೆ" ಎಂದು ತಿರುಗೇಟು ನೀಡಿದ್ದಾರೆ.