ಬೆಂಗಳೂರು:  ಕರ್ನಾಟಕದ ಗೃಹ ಸಚಿವರಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌  ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು ನಿಮ್ಮದೇ ಪಕ್ಷದ ನಾಯಕರ ವಿರುದ್ಧ ಕೇಳಿಬರುತ್ತಿರುವ ಸ್ಟಿಂಗ್ ಆಪರೇಷನ್‌ಗಳು, ರಾಜ್ಯದಲ್ಲಿ ನಡೆಯುತ್ತಿರುವ ಕೋಮುಗಲಭೆಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ನಕಲಿ ಔಷಧಿಗಳ ಹಾವಳಿ, ಹೊರರಾಜ್ಯದ ಪೊಲೀಸರು ಪದೇಪದೇ ಬಂದು ರಾಜ್ಯದಲ್ಲಿ ನಡೆಯುತ್ತಿರುವ ಗಾಂಜಾ ದಂಧೆಯನ್ನು ಬಯಲು ಮಾಡುತ್ತಿರುವುದು, ಹೀಗೆ ಒಂದರ ಹಿಂದೆ ಒಂದರಂತೆ ಗಂಭೀರ ಸಮಸ್ಯೆಗಳು ಎದುರಾಗುತ್ತಿದ್ದರೂ ನಿಮ್ಮ ನಾಲಾಯಕ್ ಸರ್ಕಾರಕ್ಕೆ ಮತ್ತು ಗೃಹ ಇಲಾಖೆಗೆ ಅವುಗಳನ್ನು ನಿಯಂತ್ರಿಸಲು ಸಮಯವಿಲ್ಲ. ಆದರೆ ಆರ್‌ಎಸ್‌ಎಸ್‌ ವಿರುದ್ಧ ಸುಳ್ಳು ಆರೋಪ ಮಾಡಲು ಮಾತ್ರ ಎಲ್ಲಿಲ್ಲದ ಉತ್ಸಾಹ! ಬಿಹಾರದ ಮದ್ದುಗುಂಡು ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಅದಕ್ಕೂ ಆರ್‌ಎಸ್‌ಎಸ್‌ಗೂ ಸಂಬಂಧ ಕಲ್ಪಿಸಲು ನಿಮಗೇಕಿಷ್ಟು ಆತುರ? ತಿರುಚಿದ, ಎಐ ಮೂಲಕ ಸೃಷ್ಟಿಸಿದ ಫೋಟೋ ಹಿಡಿದುಕೊಂಡು ಇಡೀ ಸಂಘಟನೆಯ ಮೇಲೆ ಗೂಬೆ ಕೂರಿಸುವ ನಿಮ್ಮ ಪ್ರಯತ್ನವೇ ನಿಮ್ಮ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ. ನಿಮ್ಮ ಹತಾಶೆಗೆ ಹಿಡಿದ ಕನ್ನಡಿ. ಸತ್ಯ ಹೇಳಲು ಸಾಕ್ಷಿ ಬೇಕು. ಸುಳ್ಳು ಹಬ್ಬಿಸಲು ನಿಮ್ಮ ಕಾಂಗ್ರೆಸ್ ಪಕ್ಷದ ಡರ್ಟಿ ಟ್ರಿಕ್ಸ್ ವಿಭಾಗದ ಪ್ರಚಾರ ಯಂತ್ರ ಸಾಕು ಎಂಬಂತಾಗಿದೆ!‌ ಕಳೆದ ಒಂದು ಶತಮಾನದಿಂದ ದೇಶಸೇವೆ, ಶಿಸ್ತು, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳೊಂದಿಗೆ ಬೆಳೆದು ನಿಂತಿರುವ ಆರ್‌ಎಸ್‌ಎಸ್‌ ಅನ್ನು ನಿಮ್ಮ ಸುಳ್ಳು ಪ್ರಚಾರದಿಂದ ಬೆದರಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ರಾಜಕೀಯ ದ್ವೇಷಕ್ಕೆ ಆರ್‌ಎಸ್‌ಎಸ್‌ ಎಂದಿಗೂ ತಲೆಬಾಗುವುದಿಲ್ಲ ಎಂದಿದ್ದಾರೆ.ಪ್ರಿಯಾಂಕ್‌ ಖರ್ಗೆ ಅವರೇ, ಆರ್‌ಎಸ್‌ಎಸ್‌ ಬಗ್ಗೆ ನಿಮ್ಮ ಚಿಂತೆ ಬಿಡಿ. ಮೊದಲು ಕರ್ನಾಟಕದ ಕಾನೂನು ಸುವ್ಯವಸ್ಥೆಯ ಬಗ್ಗೆ ಚಿಂತೆ ಮಾಡಿ.ಗೃಹ ಸಚಿವರಾಗಿ ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್‌ ಹೆಸರನ್ನು ಎಷ್ಟು ದಿನ ಬಳಸುತ್ತೀರಿ? ಕರ್ನಾಟಕಕ್ಕೆ ಒಂದು ಒಳ್ಳೆಯ ಆಡಳಿತ ನೀಡಲು ಕೈಲಾಗದವರು ಸಂಘದ ಇತಿಹಾಸ ಕೆದಕಲು ಹೊರಟಿರುವುದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೇಡು. ಆರ್‌ಎಸ್‌ಎಸ್‌ ಆಕಾಶವಿದ್ದಂತೆ. ಅದಕ್ಕೆ ಉಗುಳಿದರೆ ಅದು ಬೀಳುವುದು ನಿಮ್ಮ ಮೇಲೆಯೇ! ಎಂದು ಟೀಕಿಸಿದ್ದಾರೆ.