ಬೆಂಗಳೂರು :  ವಿದೇಶಿ ನೇರ ಹೂಡಿಕೆಯಲ್ಲಿ (FDI) ಕರ್ನಾಟಕವನ್ನು ದೇಶದ ನಂ. 1 ರಾಜ್ಯವನ್ನಾಗಿ ಮಾಡುವುದು, ಬೆಂಗಳೂರಿನ ಆಚೆಗೂ ಕೈಗಾರಿಕೆಗಳನ್ನು ವಿಸ್ತರಿಸುವುದು ಹಾಗೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. 

ಮೂರು ದಿನಗಳ (ನವೆಂಬರ್ 23-25) ಜಪಾನ್ ಪ್ರವಾಸದ ಕುರಿತು ಇಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೈಗಾರಿಕಾ ಸಚಿವ  ಎಂ. ಬಿ. ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ಈ ಉನ್ನತ ಮಟ್ಟದ ನಿಯೋಗದೊಂದಿಗೆ ಜಪಾನ್‌ ಪ್ರವಾಸ ಕೈಗೊಳ್ಳಲಾಗಿತ್ತು. ಅಲ್ಲಿ ಪ್ರಮುಖ ಹೂಡಿಕೆ ಮತ್ತು ಕೈಗಾರಿಕಾ ಒಪ್ಪಂದಗಳನ್ನು ನಡೆಸಲಾಗಿದೆ ಎಂದರು.  ಹಾರೋಹಳ್ಳಿ ಘಟಕದ ವಿಸ್ತರಣೆಗಾಗಿ ಕವಾಸಕಿ-ವಿಪ್ರೋ ಕವಾಸಕಿಯಿಂದ 10 ವರ್ಷಗಳಲ್ಲಿ ₹800 ಕೋಟಿ ಹೂಡಿಕೆ ಒಪ್ಪಂದ (600 ಉದ್ಯೋಗ ಸೃಷ್ಟಿ) ನಡೆಸಲಾಗಿದೆ. ಟೊಯೊಟಾ, ಪ್ಯಾನಾಸೋನಿಕ್, ಜೆಎಫ್‌ಇ ಸ್ಟೀಲ್, ಜೆಎಕ್ಸ್ ಮೆಟಲ್ಸ್, ಟಕೆಡಾ ಸೇರಿದಂತೆ ಹಲವು ದಿಗ್ಗಜ ಕಂಪನಿಗಳೊಂದಿಗೆ ಸ್ಥಳೀಕರಣ (Localisation), ಹೈಬ್ರಿಡ್ ಮೊಬಿಲಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಉಕ್ಕು ಉತ್ಪಾದನೆ ಕುರಿತು ಚರ್ಚೆ ನಡೆಸಲಾಗಿದೆ.  ಸುಮಿಟೊಮೊ ಜೊತೆ ಪ್ರಸ್ತಾವಿತ 'ಜಪಾನಿನ ಕೈಗಾರಿಕಾ ಪಾರ್ಕ್', ಸಮೀಪದಲ್ಲೇ ಜಪಾನಿನ ಶಾಲೆ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾ ತರಬೇತಿ ಕುರಿತು ಜೆಟ್ರೊ (JETRO) ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದರು.

ನಗರಾಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆ  

ಒಯಾಸಿಸ್ 21, ಅಜಬುದೈ ಹಿಲ್ಸ್, ಶಿಬುಯಾದ ಸಾರಿಗೆ ಆಧಾರಿತ ಅಭಿವೃದ್ಧಿ ಮಾದರಿಯಲ್ಲಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಪುನರಾಭಿವೃದ್ಧಿ, ನೆಲಮಾಳಿಗೆ ವಾಣಿಜ್ಯ ಸ್ಥಳ ಹಾಗೂ 'ಸಿಗ್ನೇಚರ್ ಲ್ಯಾಂಡ್‌ಮಾರ್ಕ್ ಟವರ್' ನಿರ್ಮಾಣದ ಕುರಿತು ಅಧ್ಯಯನ ನಡೆಸಲಾಗಿದೆ. ಒಸಾಕಾದ ಮೈಶಿಮಾ ಘಟಕದ ಮಾದರಿಯಲ್ಲಿ ವೈಜ್ಞಾನಿಕ ತ್ಯಾಜ್ಯದಿಂದ ಇಂಧನ (Waste-to-Energy) ವ್ಯವಸ್ಥೆ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ.  ಜಪಾನ್ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ   ಯಸುತಾಕಾ ನಕಸೋನೆ ಮತ್ತು ಭಾರತದ ರಾಯಭಾರಿ   ನಗ್ಮಾ ಮೊಹಮ್ಮದ್ ಮಲ್ಲಿಕ್ ಅವರೊಂದಿಗೆ ಮೂಲಸೌಕರ್ಯ ಸಹಕಾರ ಕುರಿತು ಭೇಟಿ ನಡೆಸಲಾಗಿದೆ.   ಏಪ್ರಿಲ್ 20-22, 2027 ರಂದು ಬೆಂಗಳೂರಿನಲ್ಲಿ ನಡೆಯಲಿರುವ 'ಇನ್ವೆಸ್ಟ್ ಕರ್ನಾಟಕ 2027' ಸಮಾವೇಶಕ್ಕೆ ಜಪಾನ್ ಸರ್ಕಾರ ಹಾಗೂ ಉದ್ಯಮಿಗಳಿಗೆ ಆಹ್ವಾನ ಮತ್ತು ಪ್ರತ್ಯೇಕ 'ಜಪಾನ್ ಕಂಟ್ರಿ ಪೆವಿಲಿಯನ್' ಪ್ರಸ್ತಾವನೆ ಇಡಲಾಗಿದೆ ಎಂದರು.