ಬೆಂಗಳೂರು: ಜಾಗತಿಕ ಪ್ರತಿಭೆ, ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನದ ಆವಿಷ್ಕಾರಗಳ ಸಂಗಮವಾಗಿರುವ   ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ 29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮ್ಮಿಟ್ 2026’ (Bengaluru Tech Summit 2026) ಶೃಂಗಸಭೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  “ಎಐ ಅಂಡ್ ಬಿಯಾಂಡ್” (AI & Beyond) ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಮೂರು ದಿನಗಳ ತಂತ್ರಜ್ಞಾನ ಶೃಂಗಸಭೆಯಲ್ಲಿ 65ಕ್ಕೂ ಹೆಚ್ಚು ದೇಶಗಳಿಂದ 10,000ಕ್ಕೂ ಅಧಿಕ ಪ್ರತಿನಿಧಿಗಳು, 700 ಭಾಷಣಕಾರರು ಹಾಗೂ 1,000ಕ್ಕೂ ಹೆಚ್ಚು ನವೋದ್ಯಮಗಳು (Startups) ಭಾಗವಹಿಸುತ್ತಿವೆ. 16 ವಿವಿಧ ವಿಷಯಾಧಾರಿತ ವಿಭಾಗಗಳಲ್ಲಿ (Thematic tracks) 140ಕ್ಕೂ ಹೆಚ್ಚು ಜ್ಞಾನಾಧಾರಿತ ಗೋಷ್ಠಿಗಳು ನಡೆಯಲಿದ್ದು, ಭವಿಷ್ಯದ ತಂತ್ರಜ್ಞಾನ, ಹೂಡಿಕೆ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಇದೊಂದು ಮಹತ್ವದ ವೇದಿಕೆಯಾಗಿದೆ. ಕರ್ನಾಟಕವು ಸದಾ ಜಗತ್ತನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾ ಬಂದಿದೆ ಎಂದರು. ಭಾರತದ ಸಾಫ್ಟ್‌ವೇರ್ ಮತ್ತು ಸೇವಾ ರಫ್ತಿನಲ್ಲಿ ಪ್ರತಿ 5 ಡಾಲರ್‌ಗಳಲ್ಲಿ 2 ಡಾಲರ್‌ಗಳಷ್ಟು ಪಾಲನ್ನು ಕರ್ನಾಟಕ ಹೊಂದಿದ್ದು, ಕಳೆದ ವರ್ಷ ರಾಜ್ಯದ ರಫ್ತು 173 ಬಿಲಿಯನ್ ಡಾಲರ್ ತಲುಪಿದೆ. 2025-26ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 9.4 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ (FDI) ಹರಿದುಬಂದಿದ್ದು, 1,000ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿವೆ. ಚಂದ್ರಯಾನ-3 ರಿಂದ ಹಿಡಿದು ಮೊಸಿಪ್ (MOSIP), ಬಯೋಕಾನ್ ಮತ್ತು ಸರ್ವಂ (Sarvam) ವರೆಗೆ ಕರ್ನಾಟಕದ ಆವಿಷ್ಕಾರಗಳು ಇಂದು ವಿಶ್ವದಾದ್ಯಂತ ಪ್ರಭಾವ ಬೀರುತ್ತಿವೆ ಎಂದರು.1997ರಲ್ಲಿ ದೇಶದ ಮೊದಲ ಐಟಿ ನೀತಿಯಿಂದ ಹಿಡಿದು ಜೈವಿಕ ತಂತ್ರಜ್ಞಾನ ನೀತಿ ಮತ್ತು ಜಿಸಿಸಿ (GCC) ನೀತಿಯವರೆಗೆ ಕರ್ನಾಟಕವು ಉದ್ಯಮಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ. ರಾಜ್ಯದಲ್ಲಿ 24,000ಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳಿದ್ದು (Startups), ದೇಶದ ಪ್ರತಿ 5 ಯುನಿಕಾರ್ನ್‌ಗಳಲ್ಲಿ ಸುಮಾರು 2 ಕರ್ನಾಟಕದಲ್ಲಿಯೇ ಹುಟ್ಟಿವೆ. ಎಲಿವೇಟ್ (ELEVATE), ಎಲಿವೇಟ್ ನೆಕ್ಸ್ಟ್ (ELEVATE NXT) ಮತ್ತು ಇನ್ನೋವರ್ಸ್ (Innoverse) ಮೂಲಕ ಭರವಸೆಯ ನವೋದ್ಯಮಗಳಿಗೆ ಈಕ್ವಿಟಿ-ಮುಕ್ತ (Equity-free) ಬೆಂಬಲ ನೀಡಲಾಗುತ್ತಿದೆ.ದೇಶದ ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ ಪ್ರತಿಭೆಗಳಲ್ಲಿ ಸುಮಾರು ಅರ್ಧದಷ್ಟು ಬೆಂಗಳೂರಿನಲ್ಲಿಯೇ ಇದ್ದಾರೆ. ರಾಜ್ಯದಲ್ಲಿ ದೇಶದ ಮೊದಲ ಸರ್ಕಾರಿ ಪ್ರೇರಿತ ‘ಎಐ ವಿಶ್ವವಿದ್ಯಾಲಯ’ ಮತ್ತು ‘ಎಐ ಹಬ್’ ನಿರ್ಮಿಸಲಾಗುತ್ತಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ಎಐ ಸಾಮರ್ಥ್ಯವನ್ನು ವಿಸ್ತರಿಸಲು ರಾಯಚೂರಿನ ಐಐಐಟಿಯಲ್ಲಿ (IIIT Raichur) ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಜೊತೆಗೆ, ‘ಬ್ರೈನ್ಜ್’ (BRAINZ) ಮೂಲಕ ರೊಬೊಟಿಕ್ಸ್ ಮತ್ತು ಎಐ ಸಂಶೋಧನೆ, ಮಾದರಿ ತಯಾರಿಕೆ ಹಾಗೂ ಉತ್ಪಾದನೆಗೆ ವಿಶೇಷ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು. 300 ಕೋಟಿ ರೂ. ವೆಚ್ಚದ ‘ನಿಪುಣ ಕರ್ನಾಟಕ’ ಯೋಜನೆಯಡಿ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನಗಳ ತರಬೇತಿ ನೀಡಲಾಗುತ್ತಿದ್ದು, ವೃತ್ತಿಜೀವನದ ವಿರಾಮದ ನಂತರ ಮರಳುತ್ತಿರುವ ಮಹಿಳೆಯರೂ ಸೇರಿದಂತೆ 33,000ಕ್ಕೂ ಹೆಚ್ಚು ಜನರು ಈಗಾಗಲೇ ಉದ್ಯಮಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೆ, ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಉತ್ಪಾದನೆಗೆ ಹೂಡಿಕೆ ಹೆಚ್ಚಿಸುವುದರ ಜೊತೆಗೆ ನೂತನ ನೀತಿಗಳ ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನೂ ಬಲಪಡಿಸಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ, ಸೆಮಿಕಂಡಕ್ಟರ್, ಎಐ, ರೊಬೊಟಿಕ್ಸ್ ಮತ್ತು ಹಸಿರು ಡಿಜಿಟಲ್ ಮೂಲಸೌಕರ್ಯದವರೆಗೆ ಕರ್ನಾಟಕದ ದೂರದೃಷ್ಟಿಯು ಯಾವುದೇ ಒಂದು ನಗರ ಅಥವಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕೇವಲ ಭಾರತಕ್ಕಷ್ಟೇ ಅಲ್ಲದೆ, ಇಡೀ ಜಗತ್ತಿಗೆ ಮಾದರಿಯಾಗುವ ತಂತ್ರಜ್ಞಾನಗಳನ್ನು ನಿರ್ಮಿಸಲು ನಾವೀನ್ಯಕಾರರು, ಉದ್ಯಮಿಗಳು ಮತ್ತು ಜಾಗತಿಕ ಹೂಡಿಕೆದಾರರು ಕೈಜೋಡಿಸಬೇಕು ಎಂದು ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ ಫ್ರಾನ್ಸ್‌ನ ಇಲೆ-ಡಿ-ಫ್ರಾನ್ಸ್ (Île-de-France) ಪ್ರಾದೇಶಿಕ ಮಂಡಳಿಯ ಅಧ್ಯಕ್ಷರಾದ  ವಾಲೆರಿ ಪೆಕ್ರೆಸ್ಸೆ, ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಡಾ. ಅಜಯ್ ಧರಂ ಸಿಂಗ್, ದಕ್ಷಿಣ ಕೊರಿಯಾದ ಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್‌ಗಳ ಸಚಿವಾಲಯದ ಉಪ ಸಚಿವರಾದ ಸೆಯುಂಗ್-ಹ್ವಾನ್ ಮೋಕ್ ಅವರು ಉಪಸ್ಥಿತರಿದ್ದರು.