ಬೆಂಗಳೂರು :  ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಜಾಗತಿಕ ಖ್ಯಾತಿಯ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಭಾರತದಲ್ಲೇ ತನ್ನ ಮೊದಲ ವಿಮಾನ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲನಾ (MRO) ಘಟಕದ ನಿರ್ಮಾಣಕ್ಕೆ ಇಂದು ಸಚಿವ ಎಂ.ಬಿ.ಪಾಟೀಲ್ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು  ಈ ಮಹತ್ವದ ಯೋಜನೆಗಾಗಿ ರಾಜ್ಯ ಸರ್ಕಾರವು 26 ಎಕರೆ ಭೂಮಿಯನ್ನು ಒದಗಿಸಿದ್ದು, ಇದರಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಘಟಕದ ಮೂಲಕ ಕಾಲಿನ್ಸ್ ಏರೋಸ್ಪೇಸ್ ಏಷ್ಯಾ-ಪೆಸಿಫಿಕ್ ಪ್ರದೇಶದ ವಿಶಾಲ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲಿದೆ ಎಂದರು. ದೇಶದ ಏರೋಸ್ಪೇಸ್ ವಲಯದಲ್ಲಿ ಸುಮಾರು ಶೇ.65ರಷ್ಟು ಪಾಲು ಹೊಂದಿರುವ ಕರ್ನಾಟಕವು ಈ ಘಟಕದ ಮೂಲಕ ವಿಮಾನಯಾನ ಸೇವೆಗಳ ರಫ್ತು ವಹಿವಾಟಿನಲ್ಲಿಯೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ. ಕಳೆದ 5 ವರ್ಷಗಳಲ್ಲಿ ಕಾಲಿನ್ಸ್ ಏರೋಸ್ಪೇಸ್ ಭಾರತದಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ದೇವನಹಳ್ಳಿಯಲ್ಲಿಯೇ ಕಂಪನಿಯ ತಯಾರಿಕಾ ಘಟಕವನ್ನು ಉದ್ಘಾಟಿಸಿದ್ದನ್ನೂ   ಸ್ಮರಿಸಿದರು.ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕದ ಬೆಳವಣಿಗೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದಲೇ ರಾಜ್ಯ ಸರ್ಕಾರವು ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಜಾರಿಗೆ ತಂದಿದೆ. 2031ರ ವೇಳೆಗೆ ಈ ವಲಯದಲ್ಲಿ ₹60,000 ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವುದರೊಂದಿಗೆ 60,000 ಉದ್ಯೋಗಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿದ್ದೇವೆ. ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಜಾಲ ವಿಸ್ತರಿಸುತ್ತಿರುವುದರ ಜೊತೆಗೆ ರಕ್ಷಣಾ ವಲಯದಲ್ಲಿಯೂ ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಸೇವೆಗಳ ಅಗತ್ಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೇಶೀಯವಾಗಿಯೇ MRO ಘಟಕಗಳನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಇದು ವೈಮಾನಿಕ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೂ ಹೊಸ ವೇಗ ನೀಡಲಿದೆ ಎಂದರು.ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ  ಡಾ. ಕೆ. ಸುಧಾಕರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ    ಅಜಯ್ ಮಹಾಜನ್, ಪ್ರೊಪೆಲ್ಲರ್ ಸಿಸ್ಟಮ್ಸ್‌ನ ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲಿನ್ಸ್ ಸಂಸ್ಥೆಯ ಹಿರಿಯ ನಿರ್ದೇಶಕ ಬಿನು ಕೃಷ್ಣಮೂರ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.